ಬೆಂಗಳೂರು: ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಮ್ಗಳು) ಶುಕ್ರವಾರ (ಡಿ.06) ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಮುಂದಿನ ಮೂರು ವರ್ಷಗಳಿಗೆ ಅಂದಾಜು ಇರುವ ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿವೆ.
ಬಹು-ವರ್ಷದ ಸುಂಕ (MYT) ವ್ಯವಸ್ಥೆಗೆ ಅಧಿಸೂಚನೆಯನ್ನು ಹೊರಡಿಸಿದ ನಂತರ KERC ದರ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. MYT ವ್ಯವಸ್ಥೆಯ ಪ್ರಕಾರ, ಎಸ್ಕಾಂಗಳು 2025-26 ನೇ ಸಾಲಿಗೆ 67 ರಿಂದ 70 ಪೈಸೆ, 2026-27 ನೇ ಸಾಲಿಗೆ 70 ರಿಂದ 75 ಪೈಸೆ ಮತ್ತು 2027-28 ನೇ ಸಾಲಿಗೆ 85 ರಿಂದ 90 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ.
ಕೆಇಆರ್ ಸಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಬೆಲೆ ಏರಿಕೆಯ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಇದು ಮಾಮೂಲಿ ಪ್ರಕ್ರಿಯೆ. ಎಲ್ಲಾ ಭಾಗಿದಾರರನ್ನು ಕರೆಸಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ದರ ಏರಿಕೆ ಬಹುತೇಕ ಏಕರೂಪವಾಗಿರಲಿದೆ ಎಂದು ಕೆಇಆರ್ ಸಿ ಮೂಲಗಳು ತಿಳಿಸಿವೆ.
ತನ್ನ ದರ ಪರಿಷ್ಕರಣೆ ಅರ್ಜಿಯ ಪ್ರಸ್ತಾವನೆಯಲ್ಲಿ, ಬೆಸ್ಕಾಂಗೆ ಮುಂದಿನ ವರ್ಷದಲ್ಲಿ (2025-26) 2,572.69 ಕೋಟಿ ಆದಾಯದ ಕೊರತೆ ಉಂಟಾಗಲಿದೆ. ಇದನ್ನು ಹೋಗಲಾಡಿಸಲು 2025-26ನೇ ಸಾಲಿಗೆ 2025ರ ಜನವರಿಯಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ಗೆ 67 ಪೈಸೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಸೇರಿದಂತೆ ಎಲ್ಲಾ ಎಸ್ಕಾಂಗಳು ದರ ಹೆಚ್ಚಳದ ಪ್ರಸ್ತಾವನೆಯನ್ನು ಮಾತ್ರ ಸಲ್ಲಿಸಿವೆ. ಈ ನಿಟ್ಟಿನಲ್ಲಿ ಕೆಇಆರ್ಸಿ ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವಿಭಾಗಗಳಿಂದ ವರದಿಗಳನ್ನು ಸ್ವೀಕರಿಸುತ್ತದೆ. ನಂತರ ಅಂತಿಮವಾಗಿ ದರ ಏರಿಕೆಯ ಅಂತಿಮ ಆದೇಶ ಹೊರಬೀಳಲಿದೆ.