ಬೆಂಗಳೂರು: ಸದಾ ಸಚಿವರು, ಶಾಸಕರು ಅಧಿಕಾರಿ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಂದ ಗಿಜಗುಡುತ್ತಿದ್ದ ರಾಜ್ಯದ ಆಡಳಿತ ಸೌಧ ವಿಧಾನಸೌಧ ಈಗ ಜನಜಂಗುಳಿಯಿಲ್ಲದೆ ಬಿಕೋ ಎನ್ನುತ್ತಿದೆ.
ಕಳೆದ ವಾರ ಹಬ್ಬದ ರಜೆಯಿಂದಾಗಿ ಬಣಗುಡುತ್ತಿದ್ದ ವಿಧಾನಸೌಧ ಈ ವಾರವೂ ಸಹ ಬಣಗುಡುತ್ತಿರುವುದು ವಿಶೇಷವಾಗಿದೆ.
ಕಾರಣ ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಚಿವರು, ಶಾಸಕರು ತೆರಳಿದ್ದಾರೆ.
ಪ್ರತಿನಿತ್ಯ ಸಚಿವರು ವಿಧಾನಸೌಧದಲ್ಲಿದ್ದಾರೆ ಎಂದರೆ ಅವರನ್ನು ಕಾಣಲು ಶಾಸಕರು ಬರುತ್ತಿದ್ದರು. ಶಾಸಕರು ಬಂದರೆ ಅವರನ್ನು ಹಿಂಬಾಲಿಸಿ ಅದೇ ಕ್ಷೇತ್ರದ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಬರುವುದು ಸಾಮಾನ್ಯವಾಗಿ ಕಾಣುತ್ತಿತ್ತು. ಶಾಸಕರು ವಿಧಾನಸೌಧ ಪ್ರವೇಶಿಸಿದರೆ ಅವರ ಹಿಂದೆಯೇ ಬರುತ್ತಿದ್ದ ಅಭಿಮಾನಿ ಬೆಂಬಲಿಗರನ್ನು ತಪಾಸಣೆ ಮಾಡಿ ಒಳಗೆ ಬಿಡಲು ವಿಧಾನಸೌಧದ ಕಾವಲಿಗಿದ್ದ ಭದ್ರತಾ ಸಿಬ್ಬಂದಿಗೆ ಸಾಕಷ್ಟು ತ್ರಾಸವಾಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲದೆ ವಿಧಾನಸೌಧ ಸಂಪೂರ್ಣ ಪ್ರದೇಶ ಖಾಲಿ ಖಾಲಿ ಹೊಡೆಯುತ್ತಿದೆ. ಪಾರ್ಕಿಂಗ್ ಜಾಗದಲ್ಲಿ ಒಂದು ಹಂತದಲ್ಲಿ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದೆ ವಿಧಾನಸೌಧದ ನಾಲ್ಕು ಭಾಗಗಳಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ಕಾಣುತ್ತಿದ್ದೆವು. ಆದರೆ ಈಗ ವಿಧಾನಸೌಧದ ಹೊರಭಾಗವು ಕೂಡ ಸಂಪೂರ್ಣವಾಗಿ ಕಾಲಿಯಿದ್ದು, ವಾಹನಗಳೇ ಕಂಡುಬರುತ್ತಿಲ್ಲ. ಇತ್ತ ಶಾಸಕರ ಭವನಕ್ಕೂ ಕೂಡ ಶಾಸಕರ ಆಗಮನವಿಲ್ಲದೆ ಬೆಂಬಲಿಗರು ಸಹ ಬೆಂಗಳೂರಿನತ್ತ ಸುಳಿಯದ ಪರಿಣಾಮ ಶಾಸಕರ ಭವನವು ಖಾಲಿ ಹೊಡೆಯುತ್ತಿದೆ.
ಶಾಸಕರ ಭವನದ ಹೋಟೆಲ್ಗೆ ಇದ್ದ ವ್ಯಾಪಾರ ಏಕಾಏಕಿ ಕಡಿಮೆಯಾಗಿದೆ ಎನ್ನಲಾಗಿದೆ. ಈ ಭಾಗದಲ್ಲಿ ತಲೆ ಎತ್ತಿದ್ದ ಜೆರಾಕ್ಸ್ ಅಂಗಡಿ ಕಂಪ್ಯೂಟರ್ ಬೆರಳಚ್ಚುಗಾರರಿಗೆ ಕೆಲಸವಿಲ್ಲದೆ ತಮ್ಮ ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಭಾಗದ ಜನಪ್ರತಿನಿಧಿಗಳನ್ನು ಕಾಣಲು ಬಂದ ಬೇರೆ ಊರಿನ ಜನರು ಅವರಿಗಾಗಿ ಕಾದುಕಾದು ಸುಸ್ತಾಗಿ ವಾಪಾಸ್ ತೆರಳುವುದು ಸರ್ವೆ ಸಾಮಾನ್ಯವಾಗಿದೆ.
ಸಣ್ಣ ಪುಟ್ಟ ವ್ಯಾಪಾರಿಗಳು ಸಹ ವ್ಯಾಪಾರವಿಲ್ಲದೆ ಕೈಚೆಲ್ಲಿ ಕೂತಿದ್ದಾರೆ. ಪ್ರತಿನಿತ್ಯ ಭದ್ರತಾ ಸಿಬ್ಬಂದಿ ವಿಧಾನಸೌಧಕ್ಕೆ ಬಂದು ಹೋಗುವವರ ತಪಾಸಣೆ ಮಾಡಲು ಹರಸಾಹಸ ಪಟ್ಟು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಈಗ ಅಂತಹಪರಿಸ್ಥಿತಿ ಇರದೇ ಇರುವುದು ವಿಶೇಷವಾಗಿದೆ.