ನವದೆಹಲಿ: ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಚಲನವಲನ ಮಾಹಿತಿಯನ್ನು ನಿಗದಿಯ ಅವಧಿಯಲ್ಲಿ ನೀಡಿಲ್ಲವೆಂಬ ಕಾರಣನೀಡಿರುವ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನೋಟಿಸ್ ಜಾರಿಗೊಳಿಸಿದೆ. ಮುಂದಿನ 14 ದಿನಗಳಲ್ಲಿ ಈ ನೋಟಿಸ್ಗೆ ಉತ್ತರಿಸಬೇಕು ಎಂದೂ ಸೂಚಿಸಲಾಗಿದೆ.
ನಾಡಾದಲ್ಲಿ ನೋಂದಾಯಿಸಿಕೊಂಡಿರುವ ಅಥ್ಲೀಟ್ಗಳು ತಮ್ಮ ಚಲನವಲನ ಮಾಹಿತಿಯನ್ನು ತಪ್ಪದೇ ನೀಡಬೇಕೆಂಬ ನಿಯಮವಿದೆ.ಸೆಪ್ಟೆಂಬರ್ 9ರಂದು ವಿನೇಶ್ ಅವರನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೊಳಪಡಿಸಲು ನಾಡಾ ಆಧಿಕಾರಿಯೊಬ್ಬರು ಸೋನಿಪತ್ನ ಖಾರ್ಕೋಡಾಗೆ ತೆರಳಿದ್ದರು. ಅಲ್ಲಿ ವಿನೇಶ್ ಅವರು ತಮ್ಮ ಮನೆಯಲ್ಲಿ ಲಭ್ಯವಿರಲಿಲ್ಲ. ಅವರು ತಮ್ಮ ಅಲಭ್ಯತೆ ಕುರಿತೂ ತಿಳಿಸಿರಲಿಲ್ಲ.
‘ಚಲನವಲನ ಮಾಹಿತಿಯನ್ನು ನೀಡುವಲ್ಲಿ ವಿನೇಶ್ ಅವರು ವಿಫಲರಾಗಿದ್ದಾರೆ. ಆದ್ದರಿಂದ ತಮಗೆ ಔಪಚಾರಿಕ ನೋಟಿಸ್ ಜಾರಿ ಮಾಡಿದ್ಧೇವೆ. ತಾವು 14 ದಿನಗಳೊಳಗೆ ವಿವರಣೆ ನೀಡಬೇಕು. ನಾವು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಹೇಳಿಕೆಗಳನ್ನು ನೀಡಿ’ ಎಂದು ನಾಡಾ ನೋಟಿಸ್ನಲ್ಲಿ ಉಲ್ಲೇಖಿಸಿದೆ.