ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ದಯನೀಯ ಸ್ಥಿತಿಗೆ ವ್ಯಾಪಕ ಅನುಕಂಪ ವ್ಯಕ್ತವಾಗುತ್ತಿದೆ. ಸಚಿನ್ ತೆಂಡೂಲ್ಕರ್ ಸಹಪಾಠಿಯಾಗಿ, ತಮ್ಮ ಆರಂಭಿಕ ವೃತ್ತಿ ಜೀವನದಲ್ಲಿ ಮಿಂಚು ಹರಿಸಿದ್ದ ಸ್ಫೋಟಕ ಬ್ಯಾಟ್ಸ್ಮನ್ ಕಾಂಬ್ಳಿ ಈಗ ನಡೆದಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇತ್ತೀಚೆಗೆ ಸಚಿನ್ ಹಾಗೂ ಕಾಂಬ್ಳಿ ಸಮಾಗಮದ ವಿಡಿಯೋ ಕ್ರಿಕೆಟ್ ಪ್ರೇಮಿಗಳ ಹೃದಯಕಲಕಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಅನಾರೋಗ್ಯಪೀಡಿತ ಕಾಂಬ್ಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅಷ್ಟೇ ಅಲ್ಲ, 1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡವೇ ಕಾಂಬ್ಳಿ ಅವರಿಗಾಗಿ ಮಿಡಿದಿದೆ. ಅವರ ಸಂಕಷ್ಟಗಳನ್ನು ಕಡಿಮೆ ಮಾಡಲು ಈ ತಂಡ ಮುಂದಾಗಿದೆ.1983ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರು ಇತ್ತೀಚೆಗೆ ಕಾಂಬ್ಳಿಗೆ ನೆರವು ನೀಡುವ ಕುರಿತು ಪ್ರಸ್ತಾಪಿಸಿದ್ದರು. ಈಗ ಭಾರತದ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್, ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.