ಬ್ರಾಹ್ಮಣ ಸಮಾಜದ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿಗಳು ಹಾಗೂ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸವಾಲು ಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಪ್ರೋತ್ಸವ 2024 ನಡೆಯಲಿದೆ.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಘಟಕದಿಂದ ಡಿಸೆಂಬರ್ 7 ರಂದು ಬೆಂಗಳೂರಿನ ಬಸವನಗುಡಿಯ ಚಿಕ್ಕಣ್ಣ ಗಾರ್ಡನ್ ಹತ್ತಿರದ ಗಾಯನ ಸಮಾಜ ಆಡಿಟೋರಿಯಂನಲ್ಲಿ ವಿಪ್ರೋತ್ಸವ 2024 ಆಯೋಜಿಸಲಾಗಿದೆ ಎಂದು ಅಖಿಲಭಾರತ ಬ್ರಾಹ್ಮಣ ಮಹಾ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೋಮಯಾಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಜನೆ, ದಾಸವಾಣಿ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ದಿನವಿಡಿ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸವಾಲುಗಳು ಹಾಗೂ ಬ್ರಾಹ್ಮಣ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳ ಕುರಿತು ತಜ್ಞರು ಹಾಗೂ ಹಿರಿಯರಿಂದ ಚಿಂತನ ಮಂತನ ನಡೆಯಲಿದೆ.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಡಾ ಗೋವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ರವಿ ಸುಬ್ರಮಣ್ಯ, ಉದಯ ಗರುಡಾಚಾರ್, ರಾಮಮೂರ್ತಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ, ಬ್ರಾಹ್ಮಣ ಸಮಾಜದ ಪ್ರಮುಖರಾದ ಗಿರೀಶ್ ನೀಲಗುಂದ, ಡಾ ಸುಬ್ರಹ್ಮಣ್ಯ ಶರ್ಮಾ, ಟಿ ರಾಮಾಚಾರಿ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಾರ್ತಿಕ ಸೋಮಯಾಜಿ ತಿಳಿಸಿದರು.