ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿರೋಧ ಪಕ್ಷ ನಾಯಕರು ಹೇಗಿರಬೇಕು ಎಂಬುದಕ್ಕೆ ಮಾದರಿ. ಆದರೆ, ಕಾಂಗ್ರೆಸ್ ವಿರೋಧ ಪಕ್ಷ ಎನ್ನುವುದಕ್ಕೆ ಕಳಂಕ ತರುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.ವಾಜಪೇಯಿ ಅವರ ಜನ್ಮಶತಾಬ್ದಿ ಅಂಗವಾಗಿ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುಶಾಸನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಟಲ್ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ ಎಂದರೆ ದೇಶದ ಜನರು ತಲೆ ತಗ್ಗಿಸುವಂತೆ ಮಾಡುತ್ತಿದೆ. ಅಧಿವೇಶನದಲ್ಲಿ ನಾನು ಅಮಿತ್ ಶಾ ಭಾಷಣ ಕೇಳಿದ್ದೇನೆ.ಅವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ತಪ್ಪು ಮಾಡುತ್ತಿದೆ ಅಂತೂ ಅವರು ಆರೋಪಿಸಿದರು.ಅಟಲ್ ಜೀ ಅವರು ವಿರೋಧ ಪಕ್ಷದಲ್ಲಿದ್ದಾಗ ನಾನು ಅವರ ಭಾಷಣ ಕಾರಿನಲ್ಲಿ ಹೋಗುವಾಗ ಕೇಳುತ್ತಿದ್ದೆ. ಅವರ ಭಾಷಣ ಕೇಳುತ್ತಾ ನಾನು ವಿರೋಧ ಪಕ್ಷ ನಾಯಕನಾದಾಗ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುತ್ತಿದ್ದೆ. ಅವರು ವಿರೋಧ ಪಕ್ಷ ನಾಯಕರಾಗಿ ಬಹಳ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರು ಮಾದರಿಯಾಗಿದ್ದರು ಎಂದು ದೇವೇಗೌಡರು ಆ ಸಂದರ್ಭವನ್ನು ನೆನಪು ಮಾಡಿಕೊಂಡರು.
ನಾನು ವಾಜಪೇಯಿ ಅವರ ಬಗ್ಗೆ ಬಹಳಷ್ಟು ಹೇಳಬಲ್ಲೆ. ನಾನು ಆಳುವ ಪಕ್ಷದ ನಾಯಕನಾಗಿದ್ದಾಗ ಅಟಲ್ ಜೀ ವಿರೋಧ ಪಕ್ಷದ ನಾಯಕರಾಗಿದ್ದರು. ನಾನು ವಿರೋಧ ಪಕ್ಷದಲ್ಲಿದ್ದಾಗ ಅವರು ನನ್ನನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಹಿಂದಿ ಭಾಷಣದ ಅರ್ಥ ತಿಳಿದುಕೊಳ್ಳುತ್ತಿದ್ದೆ. ಬಹಳ ಸೊಗಸಾಗಿ ಅವರು ಹಿಂದಿ ಮಾತನಾಡುತ್ತಿದ್ದರು. ನಾನು ಆಗಾಗ ಅವರ ತಮಾಷೆಗೆ ‘ಸರ್ ನಿಮ್ಮ ಹಿಂದಿಯಿಂದ ದೇಶದ ಸಮಸ್ಯೆ ಬಗೆಹರಿಯಲ್ಲ’ ಅಂತ ಹೇಳುತ್ತಿದ್ದೆ. ಅವರು ನಗುತ್ತಿದ್ದರು. ಬಹಳ ದೊಡ್ಡ ವ್ಯಕ್ತಿ, ದೂರದೃಷ್ಟಿ ಇದ್ದ ನಾಯಕ ಎಂದು ವಾಜಪೇಯಿ ಅವರ ಗುಣಗಾನ ಮಾಡಿದರು ಮಾಜಿ ಪ್ರಧಾನಿಗಳು.
ನಾನು ಕನಸು ಮನಸ್ಸಿನಲ್ಲಿಯೂ ಪ್ರಧಾನಿ ಆಗುತ್ತೇನೆ ಎಂದು ಆಲೋಚನೆ ಮಾಡಿರಲಿಲ್ಲ. ಅವರು ಬರೀ 13 ದಿನ ಅಧಿಕಾರದಲ್ಲಿದ್ದರು. ಕಾಕತಾಳೀಯ ಎಂದರೆ, ಅವರ ನಂತರ 13 ಪಕ್ಷಗಳು ಸೇರಿ ಸಂಯುಕ್ತ ರಂಗ ರಚನೆ ಮಾಡಿ ನನ್ನನ್ನು ಪ್ರಧಾನಿ ಮಾಡಿದರು. ಆಗ ಏನೆಲ್ಲಾ ನಡೆಯಿತು ಎಂದು ನಾನು ಹೇಳಲು ಹೋಗಲ್ಲ. ನಾನು ಬರೀ 320 ದಿನ ಪ್ರಧಾನಿ ಆಗಿದ್ದೆ ಅಷ್ಟೇ ಎಂದು ದೇವೇಗೌಡರು ಹೇಳಿದರು.
ನಾನು ವಾಜಪೇಯಿ ಅವರು ಅಧಿಕಾರದಿಂದ ಇಳಿದ ಮೇಲೆ ಅವರ ಮನೆಗೆ ಹೋಗಿದ್ದೆ. ನನ್ನ ಕಾಲದಲ್ಲಿ ಅಷ್ಟು ಕೆಲಸ ಮಾಡಲು ಆಗಿಲ್ಲ, ನೀವು ದೇಶವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂದು ಅವರಿಗೆ ಹೇಳಿದ್ದೆ. ನಾನು ಆರ್ಡಿನರಿ ಡಿಪ್ಲೊಮಾ ಮಾಡಿದವನು, ರೈತನ ಮಗ. ನೀರನ್ನು ಹೇಗೆ ಉಳಿಸಿಕೊಳ್ಳಬೇಕು, ಬಳಸಿಕೊಳ್ಳಬೇಕು ಎಂದು ತೋರಿಸಿದೆ. ಜನ ಕೊಟ್ಟ ಶಕ್ತಿಯಿಂದ ಈ ಎಲ್ಲ ಕೆಲಸ ಮಾಡಿದೆ ಎಂದು ಅವರಿಗೆ ಹೇಳಿದೆ
ಎಂದು ಮಾಜಿ ಪ್ರಧಾನಿಗಳು ಅಂದಿನ ನೆನಪುಗಳನ್ನು ಸಭಿಕರ ಮುಂದೆ ಹಂಚಿಕೊಂಡರು.ಬಿ.ಎಲ್ ಸಂತೋಷ್ ಬಗ್ಗೆ ಮಾಜಿ ಪ್ರಧಾನಿಗಳ ಮೆಚ್ಚುಗೆ:
ಸಭೆಯಲ್ಲಿ ತಮಗೂ ಮೊದಲು ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಮಾತುಗಳನ್ನು ಬಹುವಾಗಿ ಮೆಚ್ಚಿಕೊಂಡರು ಮಾಜಿ ಪ್ರಧಾನಿಗಳು.
ಸಂತೋಷ್ ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ. ಮೊದಲ ಬಾರಿಗೆ ನಿಮ್ಮ ಭಾಷಣ ಕೇಳಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ, ಮೋದಿ, ಶಾ ಅವರ ಬಗ್ಗೆ ಎದುರಾಳಿಗಳು ಮಾತನಾಡುತ್ತಾರೆ. ಅವರ ಮಾತು ಪೊಳ್ಳು. ಅದಕ್ಕೆ ಬೆಲೆ ಇಲ್ಲ ಎನ್ನುವುದನ್ನು ಜನರ ಮನ ಮುಟ್ಟುವಂತೆ ಮಾತಾಡಿದ್ದೀರಿ. ಮೊದಲ ಬಾರಿಗೆ ನಿಮ್ಮ ಜೊತೆ ನಾನು ವೇದಿಕೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಏನು ಶಕ್ತಿ ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ ಎಂದು ಸಂತೋಷ್ ಅವರನ್ನು ಉದ್ದೇಶಿಸಿ ಮಾಜಿ ಪ್ರಧಾನಿಗಳು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್, ಉನ್ನತ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ತಿಮ್ಮೇಗೌಡ ಅವರೂ ಇದೇ ಸಂದರ್ಭದಲ್ಲಿ ಅಟಲ್ ಪುರಸ್ಕಾರಕ್ಕೆ ಪಾತ್ರರಾದರು.ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.