ಮುಂಬೈ: ವಿಳಂಬದ ಮತ್ತು ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರಂದು ಇದ್ದ ಡೆಡ್ಲೈನ್ ಅನ್ನು ವಿಸ್ತರಿಸುವಂತೆ ಬಾಂಬೆ ಹೈಕೋರ್ಟ್ನಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನಿರ್ದೇಶಿಸಲ್ಪಟ್ಟಿದೆ. 2024-25ರ ಮೌಲ್ಯಮಾಪನ ವರ್ಷದ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಗಡುವು ಇದೆ. ಆದರೆ, ಐಟಿಆರ್ ಯುಟಿಲಿಟಿಯಲ್ಲಿನ ಬದಲಾದ ಕ್ರಮಗಳ ಸಮಸ್ಯೆಯಿಂದಾಗಿ ಡೆಡ್ಲೈನ್ ವಿಸ್ತರಿಸುವಂತೆ ಐಪಿಎಲ್ವೊಂದು ಸಲ್ಲಿಕೆಯಾಗಿತ್ತು. ಟ್ಯಾಕ್ಸ್ ಕನ್ಸಲ್ಟೆಂಟ್ಸ್ ಚೇಂಬರ್ನಿಂದ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಐಟಿಆರ್ ಸಲ್ಲಿಕೆಯ ಗಡುವನ್ನು ಕನಿಷ್ಠ ಜನವರಿ 15ರವರೆಗಾದರೂ ವಿಸ್ತರಿಸುವಂತೆ ಸಿಬಿಡಿಟಿಗೆ ಸೂಚಿಸಿದೆ.
ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ಟ್ಯಾಕ್ಸ್ ರಿಬೇಟ್ ಅವಕಾಶ ಸಿಗುತ್ತದೆ. ಆದರೆ, ರಿಟರನ್ ಫೈಲಿಂಗ್ ಮಾಡಲು ಬಳಸುವ ಯುಟಿಲಿಟಿ ಸಾಫ್ಟ್ವೇರ್ನಲ್ಲಿ ಮಾಡಲಾಗಿರುವ ಬದಲಾವಣೆಗಳಿಂದಾಗಿ ಈ ರಿಬೇಟ್ ಅವಕಾಶ ಸಿಗುತ್ತಿಲ್ಲ. 2024ರ ಜುಲೈ 5ರಂದು ಸಾಫ್ಟ್ವೇರ್ ಅಪ್ಡೇಟ್ ಆದಾಗಿನಿಂದ ಈ ಸಮಸ್ಯೆ ಕಾಣಿಸಿದೆ. ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಕ್ಲೇಮ್ ಮಾಡುವ ಅವಕಾಶವನ್ನು ಇದು ತೋರಿಸುತ್ತಿಲ್ಲ. ಹೀಗಾಗಿ, ಟ್ಯಾಕ್ಸ್ ಕನ್ಸಲ್ಟೆಂಟ್ಗಳ ಸಂಘಟನೆಯು ಬಾಂಬೆ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿತ್ತು.