ಬೆಂಗಳೂರು: ರೈತನಾಯಕ, ಹೋರಾಟಗಾರ, ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ 83ನೇ ವರ್ಷದ ಜನ್ಮ ದಿನವನ್ನು ಫೆ.27ರಂದು ವಿವಿಧ ಚಟುವಟಿಕೆಗಳ ಮೂಲಕ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದ್ದಾರೆ.ರೈತರಿಗೆ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ 4 ಸಾವಿರ ರೂ. ರೈತ ಸಮ್ಮಾನ್ ನಿಧಿ ನೀಡಿದ ಯಡಿಯೂರಪ್ಪ ಅವರ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ರಾಜ್ಯದ ಎಲ್ಲ ಮತಕ್ಷೇತ್ರಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲು ಕೋರಿದ್ದಾರೆ.
ಶಿಕ್ಷಣವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಯಡಿಯೂರಪ್ಪ ಅವರು ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡಿದ್ದರು. ಇದರ ಪ್ರಯೋಜನ ಪಡೆದು ಉದ್ಯಮಿಗಳಾದವರು, ಸಾಧಕರಾದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲು ಅವರು ತಿಳಿಸಿದ್ದಾರೆ. ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ನೀಡಿದ್ದು, ಈ ಬಾಂಡ್ ಪಡೆದವರಿಗೆ ಇದೀಗ ಚೆಕ್ ಲಭಿಸಿದೆ. ಬಾಲಕಿಯರ ಸಂಖ್ಯೆ ಹೆಚ್ಚಳ, ಹೆಣ್ಮಕ್ಕಳಿಗೆ ಶಿಕ್ಷಣದ ಉದ್ದೇಶ ಇದರಡಿ ಇದ್ದು, ಈ ಯೋಜನೆ ಅನುಷ್ಠಾನ ಸಂಬಂಧ ಸನ್ಮಾನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲು ತಿಳಿಸಿದ್ದಾರೆ.
ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಯಡಿಯೂರಪ್ಪ ಅವರ ಆಯುರಾರೋಗ್ಯ ವೃದ್ಧಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಕಾರ್ಯಕರ್ತರು ರಕ್ತದಾನ ಶಿಬಿರ, ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.27ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಯಡಿಯೂರಪ್ಪ ಅವರು ತಮ್ಮ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಲಭ್ಯರಿರುತ್ತಾರೆ. ಬಳಿಕ ಅವರು ಮಂಡ್ಯ ಜಿಲ್ಲೆಯ ಬೂಕನಕೆರೆಗೆ ತೆರಳುವರು ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಪಿ.ರಾಜೀವ್ ಅವರು ತಿಳಿಸಿದ್ದಾರೆ.