ಕುಂಭಮೇಳ ಭೂಮಿಯ ಮೇಲಿನ ಅತಿದೊಡ್ಡ ಮಾನವ ಸಮಾವೇಶವಾಗಿದೆ ಶತಶತಮಾನಗಳಿಂದ ಕುಂಭಮೇಳವು ನಡೆಯುತ್ತಾ ಬಂದಿದೆ ಎನ್ನುವುದಕ್ಕೆ ಭಾರತಕ್ಕೆ ಭೇಟಿ ನೀಡಿದ್ದ ಅನೇಕ ಪಾಶ್ಚಿಮಾತ್ಯ ಪ್ರವಾಸಿಗರು ತಮ್ಮ ಪ್ರವಾಸಕಥನಗಳಲ್ಲಿ ಇದನ್ನು ದಾಖಲಿಸಿರುವುದೇ ಸಾಕ್ಷಿಯಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆ ದಿನದಂದು ನಿರ್ದಿಷ್ಟ ಸ್ಥಳಗಳಲ್ಲಿ ಹರಿಯುವ ಪವಿತ್ರ ನದಿಗಳ ನೀರು ಅಮೃತವಾಗಿ ಬದಲಾಗುತ್ತದೆ ಎಂದು ನಂಬಲಾಗಿದೆ.
ಆದ್ದರಿಂದ, ಹಿಂದೂಗಳು ದೇವತಾನುಗ್ರಹವನ್ನೂ, ಆಯುರಾರೋಗ್ಯವನ್ನೂ ಪಡೆಯಲು ಈ ಪವಿತ್ರ ನದಿಗಳಲ್ಲಿ ಮೀಯುತ್ತಾರೆ. 2019 ರಲ್ಲಿ, ಪ್ರಯಾಗರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಅಂಕಿಅಂಶಗಳ ಪ್ರಕಾರ 1 ಮಿಲಿಯನ್ ವಿದೇಶಿ ಪ್ರವಾಸಿಗರು ಸೇರಿದಂತೆ 24 ಮಿಲಿಯನ್ ಜನರು ಪಾಲ್ಗೊಂಡಿದ್ದರು. ಹೆಚ್ಚು ಕುತೂಹಲಕಾರಿ ಅಂಶವೆಂದರೆ ಈ ಬಾರಿಯೂ ಸಹ ಕುಂಭಮೇಳ ಭಾರತೀಯರಿಗೆ ಮಾತ್ರ ಸೀಮಿತವಾಗಿರದೆ ಜಗತ್ತಿನಾದ್ಯಂತದ ಜನರು ಭಾಗವಹಿಸುವ ನಿರೀಕ್ಷೆಯಿದೆ ಹಾಗೂ ಭಾಗವಹಿಸುವ ಜನಸ್ತೋಮದ ಸಂಖ್ಯೆ ನಲವತ್ತು ಕೋಟಿಯನ್ನೂ ಮೀರುವ ನಿರೀಕ್ಷೆಯಿದೆ, ದಿನನಿತ್ಯದಲ್ಲಿ ನಮಗೆ ಕಾಣಸಿಗದ ಅಘೋರಿಗಳು, ನಾಗಸಾಧುಗಳನ್ನೂ, ಅನೇಕ ಅಖಾಡಗಳ ಸಾಧುಸಂತರು, ಅಸಾಧಾರಣ ಹಠಯೋಗ ಸಾಧಕರು ಹಾಘು ಸಮಾಜದ ಸಕಲ ವರ್ಗಗಳ, ವೃತ್ತಿಯ ಜನರುಗಳೂ ಈ ಮಹಾಕುಂಭದಲ್ಲಿ ನೆರೆಯುತ್ತಾರೆ.
ಹರಿದ್ವಾರ, ಉಜ್ಜಯಿನಿ, ಪ್ರಯಾಗ್ ರಾಜ್ ಮತ್ತು ನಾಸಿಕ್ ನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭ ಎಂದು ಕರೆಯಲಾಗುತ್ತದೆ ಇದಲ್ಲದೆಹರಿದ್ವಾರ ಮತ್ತು ಪ್ರಯಾಗ್ ರಾಜ್ ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧಕುಂಭ ಎನ್ನುತ್ತಾರೆ. ಪ್ರಯಾಗ್ ರಾಜ್ ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ
ಕುಂಭಮೇಳ ಎಂದು ಕರೆಯ ಲಾಗುತ್ತದೆ. ಇದಲ್ಲದೆ ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ವನ್ನು ಮಹಾಕುಂಭಮೇಳವೆಂದು ಕರೆಯಲಾಗುತ್ತದೆ. ಗುರುಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿದಾಗ ಹರಿದ್ವಾರದಲ್ಲೂ; ಕರ್ಕಾಟಕ ರಾಶಿಯನ್ನು ಪ್ರವೇಶಿಸಿದಾಗ ನಾಸಿಕ್ ನಲ್ಲೂ; ಮೇಷರಾಶಿಯನ್ನು ಪ್ರವೇಶಿಸಿದಾಗ ಉಜ್ಜಯಿನಿಯಲ್ಲಿಯೂ ಕುಂಭಗಳು ನಡೆಯುತ್ತವ.
ಈ ಮಹಾ ಕುಂಭಮೇಳವು ಜನವರಿ 13ನೇ ತಾರೀಖಿನಿಂದ ಫೆಬ್ರವರಿ 26, 2025ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದ ತಾಣದಲ್ಲಿ ನಡೆಯಲಿದೆ. ಇದು ಸಾರ್ವಜನಿಕ ಒಗ್ಗೂಡಿಕೆ ಮತ್ತು ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ. ಪ್ರತಿ 12 ವರ್ಷಗಳಲ್ಲಿ ನಡೆಯುವ ಕುಂಭಮೇಳಗಳಿಗಿಂತ ಈ ಬಾರಿಯ ಕುಂಭಮೇಳ ವಿಭಿನ್ನವಾಗಿದೆ. ಇದಕ್ಕೆ ಕಾರಣ ಇದು 144 ವರ್ಷಗಳಿಗೆ ಒಮ್ಮೆ ಬರುವ ಮಹಾಕುಂಭಮೇಳ. ಮುಂದಿನ ಮಹಾಕುಂಭಮೇಳ 2169ನೇ ಇಸವಿಯಲ್ಲಿ ಬರುವುದರಿಂದ ಈ ಆಧ್ಯಾತ್ಮಿಕ ಸಮಾವೇಶವು ಭಕ್ತವೃಂದಕ್ಕೆ ಅಪೂರ್ವವಾದದ್ದು. 45 ದಿನಗಳ ಕಾಲ ನಡೆಯುವ ಈ ಕುಂಭಮೇಳದಲ್ಲಿ ಸೂಚಿತ 5 ದಿನಗಳನ್ನು ಅತ್ಯಂತ ಪವಿತ್ರ ದಿನಗಳೆಂದು ಪರಿಗಣಿಸಲಾಗಿದ್ದು ಅಂದು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಲು ಜನರು ಕಾತುರರಾಗಿರುತ್ತಾರೆ..ಆ 5 ದಿನಗಳೆಂದರೆ ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ); ಜನವರಿ 15 – ಮಕರ ಸಂಕ್ರಾಂತಿ ಸ್ನಾನ ; ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ); ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ); ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ; ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)12 ವರ್ಷಗಳ ಬಳಿಕ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಸಲು ಉತ್ತರಪ್ರದೇಶ ಸಜ್ಜಾಗಿದೆ.
ಇದಕ್ಕಾಗಿ ಅಲ್ಲಿನ ಸರಕಾರವು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಹಿಂದೂ ಧರ್ಮದ ಅತ್ಯಂತ ಮಹತ್ವದ ಮೇಳ ಇದಾಗಿದ್ದು ಲಕ್ಷಾಂತರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರಯಾಗರಾಜ್ ನಲ್ಲಿ 2025ರಲ್ಲಿ ನಡೆಯುವ ಕುಂಭಮೇಳದಲ್ಲಿ, ಒಂದು ಅಂದಾಜಿನ ಪ್ರಕಾರ, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಇಟಲಿ ದೇಶಗಳ ಒಟ್ಟು ಜನಸಂಖ್ಯೆಗೆ ಸಮಾನವಾದಷ್ಟು ಮಂದಿ ಈ ಪವಿತ್ರ ನದಿಗಳ ದಂಡೆಯ ಮೇಲೆ ಉಪಸ್ಥಿತರಿರುವರೆಂದು ನಂಬಲಾಗಿದೆ. ಇದರಿಂದಾಗಿ ಯಾತ್ರಾರ್ಥಿಗಳ ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ವಿಶ್ವವೇ ಹಿಂದೆಂದೂ ಕಾಣದ ವ್ಯವಸ್ಥೆಗಳನ್ನು ಸರ್ಕಾರ ಮಾಡುತ್ತಿದೆ.
ಪೌರಾಣಿಕ ಹಿನ್ನೆಲೆ: ಕುಂಭಮೇಳಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆ ಇದೆ. ಕುಂಭಮೇಳದ ಆಚರಣೆಯು ಸಮುದ್ರ ಮಂಥನದದ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಮಂಥನದಲ್ಲಿ ಮೊದಲು ಕಾಣಿಸಿಕೊಂಡದ್ದು ವಿಷವಾಗಿದ್ದು, ಇದನ್ನು ಶಿವನು ಸೇವಿಸಿದನು, ಈ ವಿಷವನ್ನು ಸೇವಿಸಿದ ನಂತರ ಶಿವ ನೀಲಕಂಠ ಎಂದು ಕರೆಯಲ್ಪಟ್ಟನು. ಮಂಥನವು ಮುಂದುವರಿದಂತೆ ಇಂದ್ರನ ಮಗನಾದ ಉಚ್ಚೈಶ್ರವ ಜಯಂತ, ಅಮೃತ ಕಲಶ ಅಥವಾ ಅಮೃತದಿಂದ ತುಂಬಿದ ಮಡಕೆಯನ್ನು ನೋಡಿ, ಅದನ್ನು ಧನ್ವಂತರಿ ದೇವರ ಕೈಯಿಂದ ಕಿತ್ತುಕೊಂಡನು. ಇದನ್ನು ಗಮನಿಸಿದ ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರು ಅಸುರರನ್ನು ಎಚ್ಚರಿಸಿದರು.
ರಾಕ್ಷಸರು ಜಯಂತನನ್ನು ಬೆನ್ನಟ್ಟಿದರು. ದೈವಿಕ ಎಣಿಕೆಯ ಪ್ರಕಾರ ದೇವರ ಒಂದು ದಿನವು ಮರ್ತ್ಯ ಜೀವಿಗಳ ಒಂದು ವರ್ಷಕ್ಕೆ ಸಮಾನವಾಗಿದೆ ಮತ್ತು ಜಯಂತನು 12 ದಿನಗಳ ಕಾಲ ಅಮೃತ ಕಲಶವನ್ನು ರಾಕ್ಷಸರ ಕೈಗೆ ಬೀಳದಂತೆ ತಡೆಯಲು ಓಡಿದನು. ಈ ಹನ್ನೆರಡು ದೇವ ದಿನಗಳಲ್ಲಿ (ಮರ್ತ್ಯ ಜೀವಿಗಳ 12 ವರ್ಷಗಳಲ್ಲಿ) ಜಯಂತನಲ್ಲಿದ್ದ ಅಮೃತ ಕಲಶದಿಂದ ಅಮೃತ ತುಳುಕಿ ಬಿದ್ದ ನಾಲ್ಕು ಸ್ಥಳಗಳೆಂದರೆ ಹರಿದ್ವಾರ, ಪ್ರಯಾಗ, ನಾಸಿಕ್ ಮತ್ತು ಉಜ್ಜಯಿನಿ. ಈ ನಾಲ್ಕು ಸ್ಥಳಗಳಲ್ಲಿ ಆ ಸಮಯದಲ್ಲಿ ಸೂರ್ಯ, ಚಂದ್ರ ಮತ್ತು ಗ್ರಹಗಳು ವಿಶಿಷ್ಟವಾದ ಜ್ಯೋತಿಷ್ಯ ಜೋಡಣೆಯನ್ನು ತಲುಪಿದ್ದವು. ಆದ್ದರಿಂದಲೇ ಈ ಸ್ಥಳಗಳಲ್ಲಿ ಕುಂಭಮೇಳ ನಡೆಯುತ್ತದೆ. ಅಮೃತದ ಹನಿಗಳು ಚೆಲ್ಲಿದ ಈ ಸ್ಥಳಗಳಲ್ಲಿ ಅತೀಂದ್ರಿಯ ಶಕ್ತಿ ಇದೆಯೆಂದು ನಂಬಲಾಗಿದೆ. ಈ ಅಮೃತಕಾಲದಲ್ಲಿ ಅಮೃತದ ಬಿಂದುಗಳು ಅವಿರ್ಭವಿಸುವುದೆನ್ನುವುದು ಹಿಂದೂಗಳ ನಂಬಿಕೆ.
ಈ ಸ್ಥಳಗಳನ್ನು ಪವಿತ್ರ ಸ್ಥಳಗಳೆಂದೂ, ಈ ನಾಲ್ಕು ಸ್ಥಳಗಳಲ್ಲಿ ಹರಿಯುವ ನದಿಗಳು ಪವಿತ್ರ ನದಿಗಳೆಂದೂ, ಆ ನದಿಗಳಲ್ಲಿ ನಿರ್ದಿಷ್ಟ ದಿನಗಳಂದು ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುವುದೆಂಬುದೂ ಹಿಂದೂಗಳೆಲ್ಲರ ಅಚಲ ವಿಶ್ವಾಸ. ಬೃಹಸ್ಪತಿ ಗ್ರಹವನ್ನು ದೇವರ ಗುರು ಎಂದು ಪರಿಗಣಿಸಲಾಗಿದೆ. ಗುರುಗ್ರಹವು ರಾಶಿಚಕ್ರವನ್ನು ಪೂರ್ಣಗೊಳಿಸಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಗುರುಗ್ರಹವು ಹೀಗೆ ಒಮ್ಮೆ ರಾಶಿ ರಾಶಿಚಕ್ರವನ್ನು ಪೂರ್ಣಗೊಳಿಸಿ ಮತ್ತೆ ವೃಷಭರಾಶಿಯನ್ನು ಪ್ರವೇಶಿಸಿದಾಗ ಕುಂಭಮೇಳ ಜರಗುತ್ತದೆ. ಇದಕ್ಕೆ ಪೂರ್ಣಕುಂಭ ಎನ್ನುತ್ತಾರೆ. ಇಂತಹ 12 ಪೂರ್ಣಕುಂಭಗಳನಂತರ ಅಂದರೆ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ ಈ ವರ್ಷ ನಡೆಯುತ್ತಿರುವುದು ಅಂತಹ ಮಹಾಕುಂಭಮೇಳ. ವ್ಯಕ್ತಿಯೊಬ್ಬನ ಜೀವಿತ ಕಾಲದಲ್ಲಿ ಒಮ್ಮೆ ಮಾತ್ರ ಮಹಾಕುಂಭವನ್ನು ನೋಡುವ, ಪವಿತ್ರ ನದಿಗಳಲ್ಲಿ ಮಿಂದು ದೇವತಾನುಗ್ರಹವನ್ನು ಪಡೆಯುವ, ಸದವಕಾಶ ಇದಾಗಿದೆ. ಪ್ರಯಾಗರಾಜಕ್ಕೆ, ಪ್ರಯಾಸವಾದರೂ, ತೆರಳಿ ಪವಿತ್ರ ಅಮೃತಜಲದಲ್ಲಿ ಮಿಂದು ದೇವಕೃಪೆಗೆ ಪ್ರಪಂಚದ ಉತ್ಸಕರಾಗಿರುವ ಭಕ್ತಗಣಕ್ಕೆ ನಮೋ, ನಮೋ..