ಬೆಂಗಳೂರು: ಸದಾ ವಾಹನ ದಟ್ಟಣೆ, ಟ್ರಾಫಿಕ್ ಜಂಜಾಟದ ಮೂಲಕ ಸಿಟಿ ಜನರನ್ನ ಕಂಗಾಲಾಗಿಸಿದ್ದ ಬೆಂಗಳೂರಿನ ಟ್ರಾಫಿಕ್ ಜಾಮ್ ಭೂತ ಇದೀಗ ವಿಶ್ವಮಟ್ಟದಲ್ಲೂ ಸದ್ದು ಮಾಡುತ್ತಿದೆ. ನೆದರ್ ಲ್ಯಾಂಡ್ ನ ಲೋಕೆಷನ್ ಟೆಕ್ನಾಲಜಿ ಸಂಸ್ಥೆ ಟಾಮ್ ಟಾಮ್ ಬಿಡುಗಡೆ ಮಾಡಿರೋ ವಿಶ್ವದ ಅತಿಹೆಚ್ಚು ಸ್ಲೋ ಮೂವಿಂಗ್ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನ ವಿಶ್ವಮಟ್ಟದಲ್ಲಿ ಅನಾವರಣ ಮಾಡಿದೆ.
ಸದ್ಯ ವಿಶ್ವದ ಪ್ರಮುಖ ನಗರಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಟಾಮ್ ಟಾಮ್ ಸಂಸ್ಥೆ, ಭಾರತದ ಮೂರು ನಗರಗಳಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವುದಾಗಿ ವರದಿ ರಿಲೀಸ್ ಮಾಡಿದೆ. ಟಾಮ್ ಟಾಮ್ ವರದಿಯಲ್ಲಿ ಕಲ್ಕತ್ತಾ, ಪುಣೆ ಹಾಗೂ ಬೆಂಗಳೂರು ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವುದಾಗಿ ವರದಿಯಿಂದ ತಿಳಿದುಬಂದಿದೆ. ಇತ್ತ ರಾಜಧಾನಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿರುವ ವರದಿ ಬಹಿರಂಗವಾಗಿದ್ದು, ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ತಲುಪೋಕೆ 34 ನಿಮಿಷ 10 ಸೆಕೆಂಡ್ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ರಾಜಧಾನಿಯ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿರುವುದು ವರದಿ ಹೇಳಿದೆ.