ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ವಲ್ರ್ಡ್ ಆಡಿಯೋ-ವಿಶುವಲ್ ಅಂಡ್ ಎಂಟರ್ಟೇನ್ಮೆಂಟ್ ಸಮ್ಮಿಟ್ ಸಲಹಾ ಮಂಡಳಿಯ ವಿಸ್ತೃತ ಸಭೆಯ ಅಧ್ಯಕ್ಷತೆ ವಹಿಸಿ ವಿಶ್ವದ ಗಣ್ಯರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಸಂವಾದದಲ್ಲಿ ಭಾಗಿಯಾದ ಗಣ್ಯರು ವೇವ್ಸ್ ಶೃಂಗಸಭೆಯ ಸಲಹಾ ಮಂಡಳಿಯ ಭಾಗವಾಗಿದ್ದಾರೆ.
ಪ್ರಧಾನಿಯವರು ಸಂವಾದ ನಡೆಸಿದ ಗಣ್ಯರಲ್ಲಿ ನಟರಾದ ಅಮಿತಾಭ್ ಬಚ್ಚನ್, ದಿಲ್ಜಿತ್ ದೋಸಾಂಜ್, ರಜನಿಕಾಂತ್, ಶಾರುಖ್ ಖಾನ್, ರಣಬೀರ್ ಕಪೂರ್, ಚಿರಂಜೀವಿ, ಅನಿಲ್ ಕಪೂರ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ಎ.ಆರ್. ರೆಹಮಾನ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಇತರರು ಸೇರಿದ್ದರು.
ಫೆಬ್ರವರಿ 5 ರಿಂದ ಫೆಬ್ರವರಿ 9 ರವರೆಗೆ ಮೊದಲ ವಿಶ್ವ ಆಡಿಯೋ-ವಿಶುವಲ್ ಮನರಂಜನಾ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ.ಈ ಸಭೆಯ ಕುರಿತು ಪ್ರಧಾನಿ ಮೋದಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ ವೇವ್ಸ್ ಸಲಹಾ ಮಂಡಳಿಯ ವಿವರವಾದ ಸಭೆ ಇದೀಗ ಮುಕ್ತಾಯಗೊಂಡಿದೆ. ಸಲಹಾ ಮಂಡಳಿಯ ಸದಸ್ಯರು ವಿವಿಧ ಕ್ಷೇತ್ರಗಳ ಪ್ರಖ್ಯಾತ ವ್ಯಕ್ತಿಗಳಾಗಿದ್ದು, ಅವರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಮಾತ್ರವಲ್ಲದೆ, ಭಾರತವನ್ನು ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ನಮ್ಮ ಪ್ರಯತ್ನಗಳನ್ನು ಹೇಗೆ ಮುಂದುವರಿಸುವುದು ಎಂಬುದರ ಕುರಿತು ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಈ ಸಂವಾದವು ನಾವೀನ್ಯತೆ, ಜಾಗತಿಕ ನಾಯಕತ್ವ, ಭಾರತದ ಸಾಂಸ್ಕೃತಿಕ ಮತ್ತು ತಾಂತ್ರಿಕ ಪ್ರಭಾವ ಮತ್ತು ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಹೆಚ್ಚಿಸುವ ತಂತ್ರಗಳ ಮೇಲೆ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ವೇವ್ಸ್ ಶೃಂಗಸಭೆಯು ವಿವಿಧ ವಲಯಗಳ ಗಣ್ಯ ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ ಮತ್ತು ಅಂತರ-ಕೈಗಾರಿಕಾ ಸಹಯೋಗವನ್ನು ಬೆಳೆಸುವ ಮತ್ತು ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯಲ್ಲಿ ಭಾರತದ ಬೆಳವಣಿಗೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.
ಭಾರತದ ಸೃಜನಶೀಲ ಮತ್ತು ಮಾಧ್ಯಮ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಬೆಳೆಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವೇವ್ಸ್ ವಲ್ರ್ಡ್ ಆಡಿಯೋ-ವಿಶುವಲ್ ಅಂಡ್ ಎಂಟರ್ಟೇನ್ಮೆಂಟ್ ಸಮ್ಮಿಟ್ 2025 ಅನ್ನು ಆಯೋಜಿಸುತ್ತಿದೆ. ಫೆಬ್ರವರಿ 5-9 ರವರೆಗೆ ನಡೆಯಲಿರುವ ವೇವ್ಸ್ ಶೃಂಗಸಭೆಯ ಭಾಗವಾಗಿ, ಸಚಿವಾಲಯವು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್, ಸೀಸನ್ 1 ಅನ್ನು ಸಹ ಪ್ರಾರಂಭಿಸುತ್ತಿದೆ.