ಬುಡಾಪೆಸ್ಟ್: ಭಾರತ ಚೆಸ್ ಒಲಿಂಪಿಯಾಡ್ನಲ್ಲಿ ಭಾನುವಾರ ಇತಿಹಾಸ ನಿರ್ಮಿಸಿತು. 45ನೇ ಚೆಸ್ ಒಲಿಂಪಿಯಾಡ್ನ ಓಪನ್ ಮತ್ತು ಮಹಿಳೆಯರ ವಿಭಾಗ- ಎರಡರಲ್ಲೂ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ತಂಡ ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಪ್ರದರ್ಶಿಸಿತು.
ಓಪನ್ ವಿಭಾಗದಲ್ಲಿ ಶನಿವಾರವೇ ಭಾರತ ಚಿನ್ನ ಗೆಲ್ಲುವುದು ಖಚಿತವಾಗಿತ್ತು. ಅಂತಿಮ ಸುತ್ತಿನಲ್ಲಿ ಭಾರತ 3.5-0.5 ರಿಂದ ಸ್ಲೊವೇನಿಯಾ ತಂಡವನ್ನು ಮಣಿಸಿತು. ಡಿ.ಗುಕೇಶ್, ಅರ್ಜುನ್ ಇರಿಗೇಶಿ, ರಮೇಶಬಾಬು ಪ್ರಜ್ಞಾನಂದ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರು. ವಿದಿತ್ ಗುಜರಾತಿ, ಎದುರಾಳಿ ವಿರುದ್ಧ ಡ್ರಾ ಮಾಡಿಕೊಂಡರು.
ಮಹಿಳೆಯರ ವಿಭಾಗದಲ್ಲಿ, ಅಗ್ರ ಶ್ರೇಯಾಂಕ ಪಡೆದಿದ್ದ ಭಾರತ 3.5-0.5 ರಿಂದ ಅಜರ್ಬೈಜಾನ್ ತಂಡವನ್ನು ಮಣಿಸಿತು.ಒಲಿಂಪಿಯಾಡ್ನಲ್ಲಿ ಭಾರತ ಓಪನ್ ವಿಭಾಗದಲ್ಲಿ 2014ರಲ್ಲಿ (ನಾರ್ವೆಯ ಟ್ರೊಮ್ಸೊ) ಮತ್ತು 2022ರಲ್ಲಿ (ಚೆನ್ನೈ) ಕಂಚಿನ ಪದಕ ಗೆದ್ದುಕೊಂಡಿದ್ದು, ಮಹಿಳಾ ತಂಡ 2022ರ ಒಲಿಂಪಿಯಾಡ್ನಲ್ಲಿ ಕಂಚಿನ ಪದಕ ಗೆದ್ದಿದ್ದು ಇದುವರೆಗಿನ ಪ್ರಮಖ ಸಾಧನೆಯಾಗಿತ್ತು.ಮಹಿಳಾ ತಂಡದಲ್ಲಿ ಹಾರಿಕಾ ಮೊದಲ ಬೋರ್ಡ್ನಲ್ಲಿ ಮಮ್ಮದ್ಝಾದಾ ಗುನೇ ಅವರನ್ನು ಮಣಿಸಿದರು. ವೈಶಾಲಿ ಮತ್ತು ಉಲ್ವಿಯಾ ನಡುವಣ ಪಂದ್ಯ ಡ್ರಾ ಆಯಿತು.