ತಿ.ನರಸೀಪುರ: ಅಲ್ಪ ಸಂಖ್ಯೆಯಲ್ಲಿರುವ ಸಣ್ಣ ಪುಟ್ಟ ಸಮಾಜಗಳಿಗೂ ಸಮುದಾಯ ಭವನಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಭವನವೂ ಇಲ್ಲ, ನಿವೇಶನವೂ ಇಲ್ಲ. ತಾಲ್ಲೂಕಿನ ವೀರಶೈವ ಲಿಂಗಾಯತರು ನನ್ನೊಡನೆ ಒಗ್ಗಟ್ಟಿನಿಂದ ಬನ್ನಿ, ಅದೇಕೆ ಬಸವ ಭವನ ನಿರ್ಮಾಣಕ್ಕೆ ನಮಗೆ ನಿವೇಶನ ನೀಡುವುದಿಲ್ಲ ಎಂದು ಮಹಾಸಭಾ ಗೌರವಾಧ್ಯಕ್ಷರಾದ ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜೆಎಸ್ಎಸ್ ಸಭಾಭವನದಲ್ಲಿ ಮಂಗಳವಾರ ವೀರಶೈವ ವಿದ್ಯಾರ್ಥಿ ನಿಲಯ ನವೀಕರಣದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ಪ್ರಬಲವಾದ ಸಮುದಾಯವೊಂದಕ್ಕೆ ಇನ್ನೂ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಅನುದಾನ ಕೊಡಲ್ಲವೆಂದರೆ ಏನರ್ಥ. ನೀವೆಲ್ಲರೂ ಒಗ್ಗೂಡಿ ನನ್ನೊಡನೆ ಬನ್ನಿ ನಾನೇ ಖುದ್ದಾಗಿ ನಿವೇಶನ ಮತ್ತು ಅನುದಾನ ಮಂಜೂರು ಮಾಡಿಸುತ್ತೇನೆ. ಎಲ್ಲದಕ್ಕೂ ಮೊದಲು ಸಮುದಾಯ ಒಗ್ಗಟ್ಟಾಗಬೇಕು. ಒಗ್ಗೂಡದಿದ್ದರೆ ಸಮುದಾಯದ ಬೇಡಿಕೆ ಈಡೇರದು ಎಂದು ಬೇಸರ ವ್ಯಕ್ತಪಡಿಸಿದರು.
ಭವನ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹೆದೇವಪ್ಪ ಅನುದಾನ ಮಂಜೂರು ಮಾಡುವ ಭರವಸೆ ನೀಡಿ, ನಿವೇಶನ ಹುಡುಕಿ ಕೊಡುವಂತೆ ಸಮುದಾಯಕ್ಕೆ ಸೂಚಿಸಿದ್ದರು. ನಾವೆಷ್ಟು ಹುಡುಕಾಡಿದರೂ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ನಿವೇಶನ ಲಭ್ಯವಾಗಿಲ್ಲ. ಹಾಗಾಗಿ ನಿವೇಶನ ಕಲ್ಪಿಸುವ ಜವಾಬ್ದಾರಿಯನ್ನು ಸರ್ಕಾರ ಹಾಗೂ ಸಚಿವರಿಗೆ ಬಿಡೋಣ. ಸಮಾಜದ ಏಕೈಕ ಆಸ್ತಿಯಾಗಿರುವ ವೀರಶೈವ ವಿದ್ಯಾರ್ಥಿ ನಿಲಯವನ್ನು ಯಾವುದೇ ಕಾರಣಕ್ಕೂ ಕೆಡುವಲು ಅವಕಾಶವಿಲ್ಲ.
ನವೀಕರಣಕ್ಕೆ ಮಹಾಸಭಾದಿಂದ ಯೋಜನೆ ರೂಪಿಸಲಾಗಿದೆ. ಕಷ್ಟ ಕಾಲದಲ್ಲಿ ದೇಣಿಗೆ ಸಂಗ್ರಹಿಸಿ, ಕಟ್ಟಿರುವ ನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿರುವುದರಿಂದ ಪರ್ಯಾಯ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನವೀಕರಣದ ಅಗತ್ಯವಿದೆ ಎಂದು ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಎಂ ಎಲ್ ಹುಂಡಿ ಮಠದ ಗೌರಿಶಂಕರ ಶ್ರೀಗಳು ಮಾತನಾಡಿ, ನಿರುಪಯುಕ್ತ ಹಳೆ ಕಟ್ಟಡವಾಗಿರುವ ವೀರಶೈವ ವಿದ್ಯಾರ್ಥಿ ನಿಲಯ ಶುಭ ಸಮಾರಂಭಗಳಿಗೆ ಸದ್ಬಳಕೆಯಾಗುವಂತೆ 30 ಲಕ್ಷ ರೂಗಳ ವೆಚ್ಚದಲ್ಲಿ ನವೀಕರಣಗೊಳಿಸಲು ವೀರಶೈವ ಲಿಂಗಾಯಿತ ಮಹಾಸಭಾದಿಂದ ಯೋಜನೆಯನ್ನು ರೂಪಿಸಲಾಗಿದೆ. ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯನ್ನು ತಾರದೆ, ನವ ವಿನ್ಯಾಸದ ಸ್ಪರ್ಶವನ್ನು ನೀಡಲಾಗುತ್ತದೆ. ಸರ್ಕಾರ ಬಸವಭವನ ನಿರ್ಮಾಣಕ್ಕೆ ನಿವೇಶನ ಮತ್ತು ಅನುದಾನವನ್ನು ಮಂಜೂರು ಮಾಡಿದ ಬಳಿಕ ವಿಶಾಲವಾದ ಭೂಪ್ರದೇಶದಲ್ಲಿ ಉತ್ತಮವಾದ ಭವನವನ್ನು ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್ ಮಾತನಾಡಿ, ವೀರಶೈವ ವಿದ್ಯಾರ್ಥಿ ನಿಲಯವನ್ನು ನವೀಕರಣಗೊಳಿಸುವ ನಿರ್ಣಯಕ್ಕೆ ಸಭೆಯಲ್ಲಿ ಅನುಮೋದನೆ ನೀಡಬೇಕು. ನವೀಕರಣ ಕಾಮಗಾರಿಯನ್ನು ಆರಂಭಿಸಿದ ಬಳಿಕ ಯಾರಿಂದಲೂ ದೂರುಗಳು ಬರಬಾರದು ಎಂದರು. ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಹೇಳವರಹುಂಡಿ ನಟರಾಜು, ತಾ.ಪಂ ಮಾಜಿ ಮೂಗೂರು ಚಂದ್ರಶೇಖರ್ ಮಾತನಾಡಿದರು. ನವೀಕರಣ ಗೊಳ್ಳಲಿರುವ ವಿದ್ಯಾರ್ಥಿ ನಿಲಯಕ್ಕೆ ಹಿರಿಯೂರು ಪ್ರಕಾಶ್ ಅವರು 25 ಸಾವಿರ ರೂಗಳ ದೇಣಿಗೆ ಘೋಷಣೆ ಮಾಡಿದರು.
ಮಾಡ್ರಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡುಕುತೊರೆ ಕಲ್ಲು ಮಠದ ನಂದೀಕೇಶ್ವರ ಸ್ವಾಮೀಜಿ, ಹೊಸೂರು ಹುಂಡಿ ಮಠದ ರಾಜಶೇಖರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರುಗಳಾದ ಶಿವಮಲ್ಲಪ್ಪ ಕೆ.ಕಿರಣ್, ಪಿ.ಎಸ್. ಅಂಬಿಕಾ, ಪ್ರಧಾನ ಕಾರ್ಯದರ್ಶಿ ಕುರುಬೂರು ವಿ.ಶಿವಶಂಕರ್, ಕಾರ್ಯದರ್ಶಿಗಳಾದ ಕಾರ್ ಮಲ್ಲಪ್ಪ, ಹಲವಾರ ಪರಮೇಶ್ ಪಟೇಲ್, ಕೋಶಾಧ್ಯಕ್ಷ ದೊಡ್ಡನಹುಂಡಿ ಜಿ.ನಂಜುಂಡಸ್ವಾಮಿ, ಕಾರ್ಯಕಾರಿಣಿ ಸದಸ್ಯರಾದ ಎಸ್.ಬಿ.ಸುಗಂಧರಾಜು,
ತೊಂಟೇಶ್, ಓಂಕಾರ್ ಸ್ವಾಮಿ ಎಂ.ಗುರುಸ್ವಾಮಿ, ಕೆ.ಎಂ. ಮಲ್ಲು, ಎಂ.ಪರಶಿವಮೂರ್ತಿ, ಟಿ.ಪಿ.ಶಿವಕುಮಾರಸ್ವಾಮಿ, ಎಂ.ಸುರೇಶ, ಬಿ.ಎಸ್.ಜ್ಜಾನೇಶ್ವರಿ, ಟಿ.ಎಂ. ರವಿ, ಹಿರಿಯೂರು ವೀರೇಂದ್ರ (ನವೀನ), ಟಿ.ಬಿ.ಚಂದ್ರಧರ, ಮೆಡಿಕಲ್ ಕುಮಾರ್, ಎಂ. ಮಹೇಶ್(ಮಾಯಪ್ಪ), ಮುಖಂಡರಾದ ತುರಗನೂರು ರಾಜಣ್ಣ, ಕೆ.ಜಿ.ವೀರಣ್ಣ, ಕೇಬ್ಬೆಹುಂಡಿ ಸೋಮಶೇಖರಪ್ಪ, ಕೆ. ಇ. ಬಿ ಸಿದ್ದಲಿಂಗಸ್ವಾಮಿ, ಶೇಖರಪ್ಪ, ನಾಗರಾಜಪ್ಪ, ಬಜ್ಜಿ ನಿಂಗಪ್ಪ, ಕೇಬಲ್ ರಾಜಶೇಖರ್, ರತ್ನರಾಜ್ ಹಾಗೂ ಇತರರು ಇದ್ದರು.