ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿ, ಕನ್ನಡಿಗರ ಅಸ್ದಿತ್ವ ಮತ್ತು ಅಸ್ಮಿತಿಯನ್ನು ಎತ್ತಿ ಹಿಡಿಯಲು ಅವರನ್ನು ಒಗ್ಗೂಡಿಸಲು, ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು ಕನ್ನಡಿಗರಿಗೆ ನೀಡಿದ ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ ಅವರ ನೆನಪು ಸದಾ ಅಮರ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ತಿಳಿಸಿದರು.
ವೀರಸೇನಾನಿ ಮ.ರಾಮಮೂರ್ತಿ ಯವರ ಪುಣ್ಯಸ್ಮರಣೆಯ ಅಂಗವಾಗಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮಕ್ಕಳಕೂಟದ ಸಮೀಪ ಇರುವ ವೀರಸೇನಾನಿ ಮ.ರಾಮಮೂರ್ತಿ ಪುತ್ಥಳಿಗೆ ಎಂ. ತಿಮ್ಮಯ್ಯ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಇದೇ ವೇಳೆ ವಿಜಯನಗರ ಕಸಾಪ ಅಧ್ಯಕ್ಷ ಉಮೇಶ್ ಚಂದ್ರ ಮಾತನಾಡಿ ಕನ್ನಡ ನಾಡಿನ ಅಭಿಮಾನ ಸ್ವಾಭಿಮಾನ ಮತ್ತು ಅಸ್ಮಿತೆಯಾಗಿ ಕನ್ನಡಿಗರ ಉಸಿರಲ್ಲಿ ಬೆರೆತು ಹೋಗಿರುವ ಕೆಂಪು-ಹಳದಿ ಕನ್ನಡ ಬಾವುಟಕ್ಕೆ ಕಾನೂನಿನ ಮಾನ್ಯತೆ ಅಥವಾ ಅಧಿಕೃತ ಬಾವುಟದ ಮಾನ್ಯತೆ ಸಿಕ್ಕಿಲ್ಲ ಆದರೆ ಮ. ರಾಮಮೂರ್ತಿ ಅವರು ಎತ್ತಿ ಹಿಡಿದ ಬಾವುಟ ಇಂದಿಗೂ ಎಲ್ಲೆಡೆ ರಾರಾಜಿಸುತ್ತಿದೆ.
ಕನ್ನಡ ನಾಡು-ನುಡಿಗಾಗಿ ಶ್ರಮಿಸಿ, ಹೋರಾಟ ನಡೆಸಿದ್ದ ಮದ್ದೂರು ರಾಮಮೂರ್ತಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕೋಟಿ ಕೋಟಿ ನಮನಗಳು ಎಂದು ತಿಳಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ಧಯ್ಯ, ಪ್ರಧಾನ ಕಾರ್ಯದರ್ಶಿ ಸು.ಜಗದೀಶ, ಹೇಮಂತಕುಮಾರ್, ಜಯರಾಜು, ಕೃಷ್ಣಪ್ಪ, ನೋಣವಿನಕೆರೆ ರಾಮಕೃಷ್ಣ ಹಾಗೂ ಗಣ್ಯರು, ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು.