ಬೆಂಗಳೂರು: ಒಂಟಿಯಾಗಿ ಕಾರಿನಲ್ಲಿ ತೆರಳುವ ವೃದ್ಧ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಅಡ್ಡಗಟ್ಟಿ ಅಪಘಾತದ ನೆಪವೊಡ್ಡಿ ಹಣ ಸುಲಿಗೆ ಮಾಡುತ್ತಿರುವ ಘಟನೆಗಳು ನಗರದ ದಕ್ಷಿಣ ವಲಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿದ್ದು, ಈ ಬೆಳವಣಿಗೆ ಆತಂಕವನ್ನು ಸೃಷ್ಟಿಸಿದೆ.
ಜಯನಗರ, ಬನಶಂಕರಿ, ಜೆಪಿ ನಗರ ಸೇರಿದಂತೆ ನಗದರ ದಕ್ಷಿಣ ವಲಯಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತೀಚೆಗೆ 54 ವರ್ಷದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಜಯನಗರದ ಬೈರಪ್ಪ ಗಾರ್ಡನ್ ನಿವಾಸಿ ಎಎಸ್ ಶ್ರೀನಾಥ್ ಎಂಬುವರು ಶುಕ್ರವಾರ ದೂರು ದಾಖಲಿಸಿದ್ದಾರೆ.
ಜಯನಗರ 7ನೇ ಬ್ಲಾಕ್ನ ಕನಕಪುರ ರಸ್ತೆಯಲ್ಲಿರುವ ಜೆಎಸ್ಎಸ್ ವೃತ್ತದಲ್ಲಿ ಕೆಲ ದಿನಗಳ ಹಿಂದೆ ಸಂಜೆ 4.45ರಿಂದ 6 ಗಂಟೆಯ ನಡುವೆ ಈ ಘಟನೆ ನಡೆದಿದೆ.
ನನ್ನ ಪತ್ನಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಅನಾರೋಗ್ಯ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ಬರುವ ಆತುರದಲ್ಲಿದ್ದೆ. ಅನಂತಕುಮಾರ್ ಸರ್ಕಲ್ ಬಳಿ ನನ್ನ ಕಾರು ಡಿಕ್ಕಿ ಹೊಡೆದಿದ್ದರಿಂದ ತನ್ನ ಸಹೋದರ ಅಪಘಾತಕ್ಕೆ ಒಳಗಾಗಿದ್ದಾನೆ ಎಂದು ಆರೋಪಿಗಳು ನನ್ನ ಕಾರನ್ನು ನಿಲ್ಲಿಸಿದರು. ನಂತರ ನನ್ನ ಕಾರಿನೊಳಗೆ ಕುಳಿತು ಹಣ ನೀಡದಿದ್ದರೆ ಇನ್ನೂ ಕೆಲವರು ಬಂದು ತೊಂದರೆ ಕೊಡುತ್ತಾರೆ ಎಂದು ಹೆದರಿಸಿದರು. ಆತ ನನ್ನನ್ನು ಹೋಗಲು ಬಿಡಲಿಲ್ಲ ಬಳಿಕ UPI ಖಾತೆಗೆ 60,000 ರೂ. ಹಾಕಿಸಿಕೊಂಡ. ಘಟೆ ಬಳಿಕ ನಾನು ಬನಶಂಕರಿ ಠಾಣೆಗೆ ಹೋದೆ, ಅಲ್ಲಿ ಪೊಲೀಸರು ನನಗೆ ಆರೋಪಿಯ ಚಿತ್ರವನ್ನು ತೋರಿಸಿದರು. ಆತನನ್ನು ನಾನು ಗುರುತಿಸಿದೆ. ಬಳಿಕ ಪೊಲೀಸರು ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದರು. ನಂತರ ನಾನು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಶ್ರೀನಾಥ್ ಅವರು ಹೇಳಿದ್ದಾರೆ.
ಪೊಲೀಸರು ಬಿಎನ್ಎಸ್ನ ಸೆಕ್ಷನ್ 308(2) ಅಡಿಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ವೃದ್ಧ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾನೆ ಕೆಲ ದಿನಗಳ ಕಾಲ ಅವರ ಚಲನವಲನಗಳನ್ನು ಗಮನಿಸಿ, ನಕಲಿ ಅಪಘಾತ ಕಥೆ ಕಟ್ಟಿ, ಬೆದರಿಸುತ್ತಾನೆ. ಇದಕ್ಕೆ ಬಗ್ಗದಿದ್ದರೆ ನಂತರ ಹಿಂಸಾತ್ಮಕವಾಗಿ ವರ್ತಿಸಿ, ಆತನ ಮಾತುಗಳನ್ನು ನಂಬುವಂತೆ ಮಾಡುತ್ತಾನೆ. ನಂತರ ಕಾರಿಗೆ ಬಡಿದು, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾನೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.