ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್. ನಾರಾಯಣ ಮೂರ್ತಿ ಇತ್ತೀಚೆಗೆ ಭಾರತೀಯರು ವಾರಕ್ಕೆ 70 ಗಂಟೆಗಳವರೆಗೆ ಕೆಲಸ ಮಾಡಿ ದೇಶದ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದರು.
ಈಗ ವೇತನ ಹೆಚ್ಚಳದ ವಿಷಯದಲ್ಲಿ ನಾರಾಯಣ ಮೂರ್ತಿ ಅವರ ಸಂಸ್ಥೆ ಇನ್ಫೋಸಿಸ್ ಸುದ್ದಿಯಲ್ಲಿದೆ.
ವೇತನ ಹೆಚ್ಚಳದ ವಿಷಯದಲ್ಲಿ ಇನ್ಫೋಸಿಸ್ ನೌಕರರಿಗೆ ದೊಡ್ಡ ಹಿನ್ನಡೆಯಾಗಿರುವುದು ಸುದ್ದಿಯ ಸಾರಾಂಶ.
ಇನ್ಫೋಸಿಸ್ 2024-25ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದವರೆಗೆ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ವಿಳಂಬಗೊಳಿಸಲು ನಿರ್ಧರಿಸಿದೆ. ಇದು ವರ್ಷದ ಆರಂಭದಲ್ಲಿ ವೇತನ ಹೆಚ್ಚಳವನ್ನು ಜಾರಿಗೆ ತರುವ ಸಾಂಪ್ರದಾಯಿಕ ಅಭ್ಯಾಸದಿಂದ ವಿಮುಖವಾಗಿದೆ ಎಂದು ಮಾಧ್ಯಮ ವರದಿಗಳು ವಿಶ್ಲೇಷಿಸಿವೆ.
ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಐಟಿ ಬೇಡಿಕೆಯಲ್ಲಿನ ನಿಧಾನಗತಿಯ ಕಾರಣದಿಂದ ಸಂಸ್ಥೆ ವೇತನ ಹೆಚ್ಚಳ ವಿಳಂಬ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ವೇತನ ಹೆಚ್ಚಳವನ್ನು ವಿಳಂಬ ಮಾಡುವುದರಿಂದ ಉದ್ಯೋಗಿಗಳ ವಜಾ ದರಗಳು ಹೆಚ್ಚಾಗಬಹುದು, ಮತ್ತೊಂದೆಡೆ ವೇತನ ಹೆಚ್ಚಳ ಮಾಡಿದರೆ ಸಂಸ್ಥೆಯ ಲಾಭದಾಯಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾಗಿದ್ದು ಸಂಸ್ಥೆ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆ ಕಂಪನಿಯಲ್ಲಿ ವೇತನ ಹೆಚ್ಚಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದು, ಐಟಿ ವಲಯದಲ್ಲಿ ಬೆಳೆಯುತ್ತಿರುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಐಟಿ ಕಂಪನಿಗಳು ಅನಿವಾರ್ಯವಲ್ಲದ ಸೇವೆಗಳಿಗೆ ಗ್ರಾಹಕರ ಖರ್ಚು ಕಡಿಮೆ ಮಾಡುವುದನ್ನು ಎದುರುನೋಡುತ್ತಿವೆ. ಈ ಹಿನ್ನೆಲೆಯಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿವೆ.
ಇನ್ಫೋಸಿಸ್ ನವೆಂಬರ್ 2023 ರಲ್ಲಿ ಸಂಬಳವನ್ನು ಹೆಚ್ಚಿಸಿದ ನಂತರ, ವೇತನ ಹೆಚ್ಚಳ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿ.
ನಾರಾಯಣ ಮೂರ್ತಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ನಡುವೆಯೇ ಇನ್ಫೋಸಿಸ್ ನ ಸಂಬಳ ಹೆಚ್ಚಳವನ್ನು ವಿಳಂಬಗೊಳಿಸುವ ನಿರ್ಧಾರ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಚರ್ಚೆಗಳನ್ನು ಹುಟ್ಟುಹಾಕಿದೆ, ಈ ಬೆಳವಣಿಗೆಯಿಂದ ನಾರಾಯಣ ಮೂರ್ತಿ ಅವರೆಡೆಗೆ ಟೀಕೆಗಳು ವ್ಯಕ್ತವಾಗತೊಡಗಿವೆ.
ಮಾಧ್ಯಮ ವರದಿಗಳ ಪ್ರಕಾರ, ಇನ್ಫೋಸಿಸ್ ಮಾತ್ರವಲ್ಲದೇ ಎಚ್ಸಿಎಲ್ ಟೆಕ್, ಎಲ್ಟಿಐ ಮೈಂಡ್ಟ್ರೀ ಮತ್ತು ಎಲ್ & ಟಿ ಟೆಕ್ನಾಲಜಿ ಸರ್ವೀಸಸ್ ಸೇರಿದಂತೆ ಇತರ ಪ್ರಮುಖ ಐಟಿ ಕಂಪನಿಗಳು ಸಂಬಳ ಹೆಚ್ಚಳವನ್ನು ವಿಳಂಬ ಮಾಡುವ ಕ್ರಮ ಕೈಗೊಂಡಿವೆ. ಕಠಿಣ ವ್ಯವಹಾರ ವಾತಾವರಣದ ನಡುವೆ ಲಾಭದಾಯಕತೆಯನ್ನು ಕಾಯ್ದುಕೊಳ್ಳಲು ಐಟಿ ಕಂಪನಿಗಳು ಈ ಕ್ರಮ ಅನುಸರಿಸುತ್ತಿವೆ.