ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಇಂದು ಬಿಜೆಪಿ ಮುಖಂಡು ಹಾಗೂ ಕಾರ್ಯಕರ್ತರು ಬಸ್ ಪ್ರಯಾಣ ದರ ಏರಿಕೆ ಕ್ರಮವನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ವಿಧಾನ ಮಂಡಲದ ಉಭಯ ಸದನಗಳ ವಿಪಕ್ಷ ನಾಯಕರಾದ ಆರ್.ಅಶೋಕ್ ಮತ್ತು ಛಲುವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ರಾಜ್ಯದಲ್ಲಿ ಗ್ಯಾರೆಂಟಿಗಳ ಅನುಷ್ಠಾನ ಮಾಡಿರುವ ಸರ್ಕಾರ. ಜನ ಮೇಲೆ ಹೊಸ ವರ್ಷಕ್ಕೆ ಬೆಲೆ ಏರಿಕೆಯ ಬರೆ ಎಳೆದಿದೆ. ಸ್ತ್ರೀಯರಿಗೆ ಸ್ತ್ರೀ ಶಕ್ತಿ ಎಂಬ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಪುರುಷರಿಗೆ ಯಾವುದೇ ಯೋಜನೆಯಿಲ್ಲ. ಸ್ತ್ರೀ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಆಗುತ್ತಿರುವ ನಷ್ಟ ಭರಿಸಲು ಈಗ ಬೆಲೆ ಏರಿಕೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ವಿಪಕ್ಷನಾಯಕ ಛಲುವಾದಿ ನಾರಾಯಣಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಾಲು ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಖಜಾನೆ ತುಂಬಲು ಇದೀಗ ಬಸ್ ಪ್ರಯಾಣದರ ಹೊಸ ವರ್ಷದ ಆರಂಭದಲ್ಲಿಯೇ ಮಾಡಿದ್ದಾರೆ.
ಇದೊಂದು ಜನವಿರೋಧಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳು ಈ ಸರ್ಕಾರದಲ್ಲಿ ಆಗುತ್ತಿಲ್ಲ. ಬೆಲೆ ಏರಿಕೆ ಮಾಡುವ ಮುಖಾಂತರ ಜನರಿಗೆ ನಾಮ ಎಳೆದು ತಲೆಬೋಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪ್ರತಿಭಟನೆ ನಡೆಸಲು ಆರ್. ಅಶೋಕ್ ಬಸ್ ನಿಲ್ದಾಣದೊಳಗೆ ಹೋಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಮುಂದದಾಗ ಅಶೋಕ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.ನಮ್ಮನ್ನು ವಶಕ್ಕೆ ಪಡೆದರೆ ನಾವು ಕೋರ್ಟ್ಗೆ ಹೋಗುತ್ತೇವೆ. ನಾವು ಪ್ರತಿಭಟನೆ ಮಾಡಲು ಬಂದಿಲ್ಲ ಎಂದು ಅಶೋಕ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರೊಂದಿಗೆ ಏರು ಧ್ವನಿಯಲ್ಲಿ ಮಾತುಕತೆ ನಡೆಸಿದ ಆರ್. ಅಶೋಕ್ ಅವರು ತದನಂತರ ಬಸ್ ನಿಲ್ದಾಣದೊಳಕ್ಕೆ ಪ್ರವೇಶಿಸಿ ಬಸ್ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ನಮ್ಮನ್ನು ಕ್ಷಮಿಸಿ ಎಂದು ಕೋರಿದ್ದಾರೆ.