ಬೆಂಗಳೂರು: ಹಬ್ಬದ ಸಂಭ್ರಮದಲ್ಲಿ ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ 11 ಮಂದಿ ಪುಂಡರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿ ರೌಡಿ ಪಟ್ಟಿಗೆ ಸೇರಿಸಿದ್ದಾರೆ.ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ನಯೀಂ ಪಾಶಾ, ಅರಾಫತ್, ಸಾಹಿಲ್ ಹುಸೈನ್, ನಜ್ಮತ್, ಅದ್ನಾನ್ ಪಾಶಾ, ನಿಯಾಮತುಲ್ಲಾ ಸೇರಿಒಟ್ಟು 11 ಆರೋಪಿಗಳನ್ನ ಬಂಧಿಸಿ 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಿ ಎಲ್ಲರನ್ನೂ ರೌಡಿ ಪಟ್ಟಿಗೆ ಸೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 13ರಂದು ಶಬ್-ಇ-ಬಾರಾತ್ ಹಬ್ಬ ಆಚರಣೆಗೆ ಕೆ.ಜಿ ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು.ಬಳಿಕ ಅದೇ ಸಂದರ್ಭದಲ್ಲಿ ರೀಲ್ಸ್ ಕ್ರೇಜ್ಗಾಗಿ ಮಾರಕಾಸ್ತ್ರ ಹಿಡಿದು, ತ್ರಿಬಲ್ ರೈಡ್, ವ್ಹೀಲಿಂಗ್ ಮಾಡುತ್ತಾ ಕೆ.ಜಿ ಹಳ್ಳಿಯಿಂದ, ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್ವರೆಗೂ ಆರೋಪಿಗಳು ಹೋಗಿದ್ದರು.ಅದೇ ರೀತಿ ಕೆ.ಜಿ ಹಳ್ಳಿಗೆ ವಾಪಸಾಗಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರ ಮಧ್ಯೆಯೂ ಕಿಡಿಗೇಡಿಗಳ ಕೃತ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಗಂಭೀರವಾಗಿ ಪರಿಗಣಿಸಿದ್ದರು.ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ 11 ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.