ಬೆಳಗಾವಿ: ಮಹಾತ್ಮಗಾಂಧಿಜೀಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆವಹಿಸಿ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಾಂಗ್ರೆಸ್ ಪಕ್ಷದ ವತಿಯಿಂದ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಸಂಸತ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಆಡಿರುವ ಮಾತುಗಳನ್ನು ವಿಷಯ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಲ್ಲಿ ಇಂದು ಬೆಳಗ್ಗೆಯಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನ, ಫೋಟೋ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.ಇಂದು ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನ ಹಾಗೂ ಪೋಟೋ ಗ್ಯಾಲರಿಯನ್ನು ಉದ್ಘಾಟಿಸಿದ ಸಿಎಂ ಅವರು, ಭವನದಲ್ಲಿ ಇರುವ ಫೋಟೋಗಳನ್ನು ವೀಕ್ಷಣೆ ಮಾಡಿದರು.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಿರುವ ಖಾದಿ ಉತ್ಸವಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಖಾದಿ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.ನಮ್ಮ ಸರಸ್ ಮೇಳ, ನಮ್ಮ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಶರಣ್ ಪ್ರಕಾಶ್ ಪಾಟೀಲ್, ಹಿರಿಯರಾದ ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.