ರಾಮನಗರ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಬಳಿ ಇರುವ ಮಲ್ಲಿಕ್ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ಕನಕಪುರ ಮೂಲದ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ. ಕನಕಪುರ ನಿವಾಸಿ ಕುಮಾರಸ್ವಾಮಿ (40) ಮೃತ ಅಯ್ಯಪ್ಪ ಮಾಲಾಧಾರಿ. ಕುಮಾರಸ್ವಾಮಿ ಅವರು ಮೂರು ದಿನದ ಹಿಂದೆ ಶಬರಿಮಲೆಗೆ ತೆರಳಿದ್ದರು. ಕುಮಾರಸ್ವಾಮಿ ಅವರು ನಿನ್ನೆ ಸಂಜೆ ದೇವಸ್ಥಾನದ ಸನ್ನಿಧಾನದಿಂದ ಮಲ್ಲಿಕ್ ಪುರಂಗೆ ಸಂಪರ್ಕಿಸುವ ಮೇಲ್ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದಾರೆ.
ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಅವರನ್ನು ಮೊದಲು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪಂಪಾ ಸರ್ಕಾರಿಯಲ್ಲಿ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿತು. ಆದರೆ, ದುರಾದೃಷ್ಟವಶಾತ್ ಕುಮಾರಸ್ವಾಮಿ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ವರದಿಯಾಗಿದೆ.
ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕೇರಳ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರ ಪ್ರಕಾರ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕುಮಾರಸ್ವಾಮಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಕೇರಳದ ಪಂಪ ಪೊಲೀಸ್ ಠಾಣೆಯ ಬಳಿ ಆಸ್ಪತ್ರೆಯಲ್ಲಿ ಮೃತದೇಹ ಇದೆ. ಕುಮಾರಸ್ವಾಮಿ ಅವರ ಕುಟುಂಬಸ್ಥರು ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. “ಮನೆಯಲ್ಲಿ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ” ಎಂದು ಕುಮಾರಸ್ವಾಮಿ ಅವರ ಪತ್ನಿ ಹೇಳಿದ್ದಾರೆ.