ಚಿಕ್ಕಮಗಳೂರು: ಈ ಹಿಂದೆ ನಕ್ಸಲಿಸಂ ಅನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಆರು ನಕ್ಸಲರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ನಕ್ಸಲರು ಇರಿಸಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ದಿನಗಳ ನಿರಂತರ ಹುಡುಕಾಟದ ನಂತರ ಪೊಲೀಸರಿಗೆ ಮೇಗೂರು ಅರಣ್ಯ ಪ್ರದೇಶದಲ್ಲಿ ಆರು ಬಂದೂಕು ಹಾಗೂ ಮದ್ದು ಗುಂಡು ದೊರೆತಿವೆ. ಅಂತೆಯೇ ಒಂದು ಎ.ಕೆ-56, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್ಬಿಬಿಎಲ್, ಒಂದು ಸ್ವದೇಶ ನಿರ್ಮಿತ ಬಂದೂಕು ಸಿಕ್ಕಿದೆ. 7.62 ಎಂಎಂ ಎ.ಕೆ. ಮದ್ದುಗುಂಡು-11, 303- ರೈಫಲ್ ಮದ್ದುಗುಂಡು – 133, 12 ಬೋರ್ ಕಾರ್ಟ್ರಿಡ್ಜಸ್ – 24, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು – 8 ಸೇರಿ ಒಟ್ಟು 176 ಮದ್ದುಗುಂಡು, ಎ.ಕೆ-56 ಖಾಲಿ ಮ್ಯಾಗ್ಜಿನ್ – 01 ದೊರೆತಿದೆ.
ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 251 (1) (ಬಿ), 7 ಮತ್ತು 25 (1ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ. ಬುಧವಾರ ಮುಖ್ಯವಾಹಿನಿಗೆ ಬಂದ ನಕ್ಸಲರು, ಅದೇ ಮೇಗೂರು ಅರಣ್ಯದಿಂದ ಹೊರ ಬಂದಿದ್ದರು. ನಕ್ಸಲರು ಶರಣಾಗುವ ಮೊದಲು ಕೊನೆಯ ಸಭೆ ನಡೆಸಿದ್ದ ಮೇಗೂರು ಅರಣ್ಯ ಪ್ರದೇಶದಲ್ಲಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕೊಪ್ಪ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿತ್ತು.
ಇನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ಅವರ ಮುಂದೆ ಶರಣಾಗಿದ್ದ ಆರು ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಶರಣಾಗತಿ ಮಾಡಿರಲಿಲ್ಲ. ಅವರು ತಮ್ಮ ಹಸಿರು ಸಮವಸ್ತ್ರವನ್ನು ಸಾಂಕೇತಿಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿ ತಮ್ಮ ಶರಣಾಗತಿಯನ್ನು ಘೋಷಿಸಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣಾದ ಮಾವೋವಾದಿಗಳಿಗೆ ಗುಲಾಬಿಗಳು ಮತ್ತು ಭಾರತೀಯ ಸಂವಿಧಾನದ ಪ್ರತಿಗಳನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಸ್ವಾಗತಿಸಿದರು.
ಅಲ್ಲದೆ ಮಾವೋವಾದಿ ಚಳುವಳಿಯನ್ನು ನಿರ್ಮೂಲನೆ ಮಾಡುವುದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉದ್ದೇಶ, ಎಲ್ಲಾ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಮತ್ತು ಹಿಂಸಾತ್ಮಕ ವಿಧಾನಗಳನ್ನು ಅಳವಡಿಸಿಕೊಳ್ಳಬಾರದು ಎಂದು ಹೇಳಿದರು, ಅದು ಅವರ ಸರ್ಕಾರದ ನಿಲುವು ಕೂಡ ಆಗಿದೆ. ಶರಣಾದ ಮಾವೋವಾದಿಗಳ ಬಂದೂಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.
ಇನ್ನು ನಕ್ಸಲರ ಶರಣಾಗತಿ ಕುರಿತು ಪ್ರತಿಪಕ್ಷ ಬಿಜೆಪಿ ಸರ್ಕಾರ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದು, ‘ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ಶರಣಾಗುವವರು ತಮ್ಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒದಗಿಸಬೇಕು ಎಂದು ಹೇಳಿದರು.
ಶರಣಾಗುವ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ನೀಡಿದ ನಂತರವೇ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ನೀಡಬೇಕು ಮತ್ತು ಮುಖ್ಯವಾಗಿ ಅವರಿಗೆ ಶಸ್ತ್ರಾಸ್ತ್ರಗಳನ್ನು ಯಾರು ಒದಗಿಸಿದ್ದಾರೆ ಎಂಬ ಮಾಹಿತಿಯನ್ನು ಸಹ ನೀಡಬೇಕು. ತನಿಖೆಗೆ ಸಂಪೂರ್ಣ ಸಹಕಾರ ನೀಡಿದರೆ ಮಾತ್ರ ಪ್ಯಾಕೇಜ್ ನೀಡಬೇಕು. ಮಾವೋವಾದಿಗಳು ಪೊಲೀಸರು, ಸೈನಿಕರು ಮತ್ತು ಸಾಮಾನ್ಯ ಜನರನ್ನು ಕೊಂದಿದ್ದಾರೆ. ಅವರು ತಮ್ಮ ಬೆಂಬಲ ನೆಲೆಯ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದಿದ್ದರು.
ಅಂತೆಯೇ “ನಕ್ಸಲರ ಶರಣಾಗತಿ ಒಂದು ತಂತ್ರ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ಸಿದ್ಧಾಂತ ಮತ್ತು ಹಿಂಸಾಚಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆಯೇ ಎಂಬುದನ್ನು ದೃಢಪಡಿಸಬೇಕು. ತನಿಖೆಯನ್ನು ಶರಣಾದ ಆರು ಮಾವೋವಾದಿಗಳಿಗೆ ಮಾತ್ರ ಸೀಮಿತಗೊಳಿಸಬಾರದು” ಎಂದೂ ರವಿ ಸರ್ಕಾರಕ್ಕೆ ಒತ್ತಾಯಿಸಿದರು.
ಇನ್ನು ಬಿಜೆಪಿ ಟೀಕೆಗಳಿಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು, ‘ಶರಣಾದ ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಸೆದಿದ್ದಾರೆ ಎಂದು ನಂಬಲಾಗಿದೆ ಮತ್ತು ಪೊಲೀಸರು ಅವರನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಮಾವೋವಾದಿಗಳಿಗೆ ಪುನರ್ವಸತಿ ಒದಗಿಸುವಲ್ಲಿ ತೋರಿಸಿದ ಬದ್ಧತೆಯನ್ನು ಶಸ್ತ್ರಾಸ್ತ್ರಗಳನ್ನು ಹುಡುಕುವಲ್ಲಿ ತೋರಿಸುತ್ತಿಲ್ಲ ಎಂದು ಹೇಳಿಕೊಂಡ ಬಿಜೆಪಿಯ ಆರೋಪಗಳ ಕುರಿತು, ಅವರು, “ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ” ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.