ಬೆಂಗಳೂರು: ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಭಾಗವಾಗಿ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಆರು ಮಂದಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ, ಮುಖ್ಯವಾಹಿನಿಗೆ ಮರಳಿದ್ದು, ನಕ್ಸಲರ ಈ ಶರಣಾಗತಿಯಲ್ಲಿ ಬುಡಕಟ್ಟು ಮಹಿಳೆ ಗೌರಮ್ಮ ಅವರ ಪಾತ್ರ ಪ್ರಮುಖವಾಗಿತ್ತು.
ಗೋಪಾಲಕಿಯಾಗಿರುವ ಗೌರಮ್ಮ ಅವರು, ಸರ್ಕಾರ ಮತ್ತು ನಕ್ಸಲರ ನಡುವೆ ಸಂದೇಶವಾಹಕಿಯಾಗಿ ಕೆಲಸ ಮಾಡಿದ್ದರು.
ಗೌರಮ್ಮ ಅವರು ಶೃಂಗೇರಿ ತಾಲ್ಲೂಕಿನ ಕಿಗ್ಗಾ ಬಳಿಯ ಕಿತ್ತಲೆಗುಳಿಯ ನಿವಾಸಿಯಾಗಿದ್ದು, ಹಸುಗಳಿಗೆ ಮೇಯಿಸಲು ಕಾಡಿಗೆ ಹೋಗಿ, ಅಲ್ಲಿ ನಕ್ಸಲರ ಭೇಟಿ ಮಾಡಿ, ಅವರು ನೀಡಿದ ಸಂದೇಶವನ್ನು ಸರ್ಕಾರಕ್ಕೆ ರವಾನಿಸುತ್ತಿದ್ದರು. ಗೌರಮ್ಮ ಅವರಿಗೆ ಶರಣಾದ ನಕ್ಸಲರ ಅಡಗುತಾಣಗಳು ತಿಳಿದಿತ್ತು. ಹೀಗಾಗಿ ಅವರೊಂದಿಗೆ ಸಂವಹನ ಸಾಧಿಸುತ್ತಿದ್ದರು. ನಕ್ಸಲರು ಕೂಡ ಗೌರಮ್ಮ ಅವರ ಮೇಲೆ ನಂಬಿಕೆ ಇಟ್ಟಿದ್ದರು. 6 ಮಂದಿ ನಕ್ಸಲರ ಪೈಕಿ ಮುಂಡಗಾರು ಲತಾ ಗೌರಮ್ಮ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು. ಆ ವೇಳೆ ಪುನರ್ವಸತಿ ಸಮಿತಿಯಿಂದ ಬಂದ ಪತ್ರಗಳನ್ನು ಲತಾ ಅವರಿಗೆ ನೀಡುತ್ತಿದ್ದರು.
ಸರ್ಕಾರದ ಪತ್ರಗಳು ಮತ್ತು ಪುನರ್ವಸತಿ ಪ್ಯಾಕೇಜ್ ಅನ್ನು ಪರಿಶೀಲಿಸಿದ ನಕ್ಸಲರು ಸರ್ಕಾರದ ಮೇಲೆ ನಂಬಿಕೆ ಇರಿಸಿ, ಶರಣಾಗಲು ನಿರ್ಧರಿಸಿದರು ಎಂದು ಸಮಿತಿ ಸದಸ್ಯ ಪಾರ್ವತೀಶ ಬಿಳಿದಾಳೆ ಅವರು ಹೇಳಿದ್ದಾರೆ.
ಮಾಜಿ ನಕ್ಸಲ್ ಸುರೇಶ್ ಅಂಗಡಿ ಅವರು ಶರಣಾದ ನಕ್ಸಲರಲ್ಲಿ ಒಬ್ಬರಾದ ಅವರ ಪತ್ನಿ ವನಜಾಕ್ಷಿ ಬಾಳೆಹೊಳೆ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರ ಅವರು ಶರಣಾಗುವ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿತ್ತು ಎಂದು ಹೇಳಲಾಗುತ್ತಿದೆ.
ತಂತ್ರಜ್ಞಾನದಲ್ಲಿ ಪರಿಣತರಾಗಿರುವ ಇಂದಿನ ಯುವಕರು ನಕ್ಸಲೈಟ್ ಚಳುವಳಿಗೆ ಬೆಂಬಲ ನೀಡುವುದು ಕಡಿಮೆಯಾಗಿದೆ ಎಂದು ಸುರೇಶ್ ಅವರು, ತಮ್ಮ ಪತ್ರದಲ್ಲಿ ಬರೆದಿದ್ದರು. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಹೋರಾಡಲು ಆಯ್ಕೆಗಳಿವೆ. ವೈದ್ಯಕೀಯ ಆರೈಕೆ ಹೇಗೆ ಸಿಗುತ್ತಿದೆ ಮತ್ತು ಕೇರಳ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರು ಅವರನ್ನು ಎಷ್ಟು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರು ವಿವರಿಸಿದ್ದರು ಎಂದು ತಿಳಿದುಬಂದಿದೆ,
ಕೆಲವು ವರ್ಷಗಳ ಹಿಂದೆ ಕೇರಳದ ಅರಣ್ಯಗಳಲ್ಲಿ ಎಎನ್ಎಫ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕಾಡಾನೆಯ ದಾಳಿಯಲ್ಲಿ ಸುರೇಶ್ ಅವರು ತೀವ್ರವಾಗಿ ಗಾಯಗೊಂಡಿದ್ದರು.
ಗೌರಮ್ಮ ಅಷ್ಟೇ ಅಲ್ಲದೆ, ನಕ್ಸಲರ ಶರಣಾಗತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯ ಪಾತ್ರ ಕೂಡ ಪ್ರಮುಖವಾಗಿತ್ತು. “ಎಎನ್ಎಫ್ನೊಂದಿಗಿನ ತಮ್ಮ ಅವಧಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಆಂತರಿಕ ಭದ್ರತೆ) ವೆಂಕಟೇಶ್ ಪ್ರಸಾದ್ ಅವರು, ನಕ್ಸಲರು ಮತ್ತು ಅವರ ಸಂಪರ್ಕಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಮಿತಿಯ ಇಬ್ಬರು ಸದಸ್ಯರು ಮತ್ತು ಬರಹಗಾರ ಬಜಗೆರೆ ಜಯಪ್ರಕಾಶ್ ಮತ್ತು ಶಿವಮೊಗ್ಗ ಮೂಲದ ವಕೀಲ ಕೆ.ಪಿ. ಶ್ರೀಪಾಲ ಸೇರಿದಂತೆ ಒಂದು ತಂಡವು ಪರಿಣಾಮಕಾರಿಯಾಗಿ ಕೆಲಸ ಮಾಡಿ ಆರು ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಪಾರ್ವತೀಶ್ ಅವರು ಮಾಹಿತಿ ನೀಡಿದ್ದಾರೆ.