ದೇವನಹಳ್ಳಿ: ಕರ್ನಾಟಕ ಕೈಗಾರಿಕೆ ಪ್ರದೇಶಾ ಭಿವೃದ್ಧಿ ಮಂಡಳಿ (ಕೆಐಎಡಿಬಿ) ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ರಬ್ಬನಹಳ್ಳಿ, ರಾಮನಾಥಪುರ ಸುತ್ತಮುತ್ತಲ ಗ್ರಾಮಗಳಲ್ಲಿನ ಸುಮಾರು 500 ಎಕರೆಯಷ್ಟು ರೈತರಭೂಮಿಯನ್ನು ಸ್ವಾಧೀನಪಡಿಸಿವ ಹಿನ್ನಲೆಯಲ್ಲಿ ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ದಯಾ
ನಂದ ಭಂಡಾರಿ ನೇತೃತ್ವದಲ್ಲಿ ರೈತರೊಂದಿಗೆ ಸಭೆ ಶಾಂತಿಯುತವಾಗಿ ನಡೆಯಿತು.
ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಮತ್ತು ಕೆಐಎಡಿಬಿ ಅಧಿಕಾರಿಗಳ ವಿಶೇಷ ಸಭೆಯಲ್ಲಿ ರೈತರು ಯಾವುದೇ ಕಾರಣಕ್ಕೂ ಜಮೀನು ಕೊಡಲಾಗುವುದಿಲ್ಲ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಪಟ್ಟು ಹಿಡಿದರು.
ಸಭೆಯಲ್ಲಿ ಪ್ರತಿ ಎಕರೆಗೆ 1.50ಕೋಟಿ ರೂ. ಬೆಲೆಯ ಪ್ರಸ್ತಾವನೆಯನ್ನು ರೈತರ ಮುಂದಿಡುತ್ತಿದ್ದಂತೆ, ರೈತರು ತಾವು ಜಮೀನು ಕೊಡುವುದಿಲ್ಲವೆಂದಾಗ ಪ್ರಸ್ತಾವನೆ ಯಾಕೆ ಎಂದು ಪ್ರಶ್ನಿಸಿ, ನೀವು ಕೊಡುವ ಹಣ ಇರುವುದಿಲ್ಲ. ನಾವು ನೂರಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ.
ಉತ್ತಮ ನೀರಿನ ಮೂಲ ಇರುವ ಭೂಮಿ ಫಲವತ್ತಾಗಿದೆ. ಕ್ಯಾಚ್ಮೆಂಟ್ ಪ್ರದೇಶವಾಗಿದೆ. ಇಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದರು. ರೈತರ ಅಹವಾಲು ಮತ್ತು ಅಭಿಪ್ರಾಯಗಳನ್ನು ಕಲೆ ಹಾಕಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ರೈತರಿಗೆ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.
ರೈತರಿಗೆ ಇಷ್ಟವಿಲ್ಲದಿದ್ದರೂ ಯಾಕೆ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಬಾರದು. ರೈತರ ಸ್ಥಿತಿಗತಿಗಳನ್ನು ಅರಿತುಕೊಳ್ಳಬೇಕು. ಹೈನುಗಾರಿಕೆ ಮತ್ತು ಕೃಷಿ ಅವಲಂಬಿತ ರೈತರು ಇರುವುದರಿಂದ ಭೂಸ್ವಾಧೀನ ಕೈಬಿಡುವುದು ಉತ್ತಮವೆಂದು ಅಧಿಕಾರಿಗಳಿಗೆ ಸೂಚಿಸಿದರು. ರೈತ ಮುಖಂಡ ರಬ್ಬನಹಳ್ಳಿ ಪ್ರಭಾಕರ್ ಮಾತನಾಡಿ, ಯಾವುದೇ ಸರಕಾರವಿರಲೀ, ಯಾವುದೇ ಅಧಿಕಾರಿಯಾಗಲೀ ನೀವು 2009 ರ ನೋಟಿಫಿಕೇಶನ್ ಮಾಡುವ ಮುನ್ನಾ ರೈತರಿಗೆ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಮೌಕಿಕವಾಗಿ ಸಾರ್ವಜನಿಕ ಪ್ರಕಟಣೆ ನೀಡಿಲ್ಲ.
ರೈತರ ಒಪ್ಪಿಗೆ ಪಡೆದಿಲ್ಲ. ಇದರ ಸಭೆಗಳನ್ನು ನಡೆಸಿ ರೈತರಿಗೆ ನೊಟೀಸ್ಗಳನ್ನು ಕೊಡಬೇಕು. ನಂತರ ಭೂಸ್ವಾಧೀನಕ್ಕೆ ಮುಂದಾಗಬೇಕು ಇದನ್ನು ಮಾಡಿಲ್ಲವೆಂದು ಸಭೆಯಲ್ಲಿ ಅಧಿಕಾರಿಗಳಿಗೆ ರೈತ ಮುಖಂಡ ರಬ್ಬನಹಳ್ಳಿ ಪ್ರಭಾಕರ್ ಪ್ರಶ್ನಿಸಿದರು.ಸಭೆಯನ್ನುದ್ದೇಶಿ ರಾಮನಾಥಪುರ ರೈತ ಮುಖಂಡ ಸಿ.ಪ್ರಸನ್ನಕುಮಾರ್, ಎಸ್.ನಾರಾಯಣಸ್ವಾಮಿ, ರಬ್ಬನಹಳ್ಳಿ ಡಿ.ಕೆಂಪಣ್ಣ, ಆರ್.ಕೆ.ಮಂಜುನಾಥ್, ಆರ್.ಎನ್.ಸುಬ್ಬೇಗೌಡ, ಜಯರಾಮ್, ಆರ್.ಎಸ್.ಜಯರಾಮಯ್ಯ, ಅಶ್ವತ್ಥ್ಗೌಡ ಸೇರಿದಂತೆ ಹಲವಾರು ರೈತ ಮುಖಂಡರು ಭೂಮಿಯನ್ನು ಕೊಡುವುದಿಲ್ಲ. ಅಧಿಕಾರಿಗಳು ನಮಗೆ ಸ್ಪಂಧಿಸಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಭೂ ಸ್ವಾಧೀನ ವಿಶೇಷ ಅಧಿಕಾರಿ ಎನ್.ತೇಜಸ್ಕುಮಾರ್, ಪ್ರದೇಶಾಭಿವೃದ್ಧಿ ಅಧಿಕಾರಿ ಸುನೀಲ್, ಎಇಒ ವಿಜಯ್ ಶಂಕರ್, ಸಬ್ರಿಜಿಸ್ಟ್ರಾರ್ ಶ್ರೀನಾಥ್, ಪೊಲೀಸ್ ಇನ್ಸ್ಪೆಕ್ಟರ್ ದಿಲೀಪ್ಕುಮಾರ್, ಎಎಸ್ಐ ವೆಂಕಟಛಲಯ್ಯ, ಸಿಬ್ಬಂದಿ ವಾಗೀಶ, ನಿಂಗಜ್ಜ, ಕೆಐಎಡಿಬಿ ಕಚೇರಿ ಸಿಬ್ಬಂದಿ, ರೈತ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ರೈತರು ಇದ್ದರು.