ಮುಂಬೈ ರಣಜಿ ಕ್ರಿಕೆಟ್ ತಂಡ ಮತ್ತು ರೆಸ್ಟ್ ಆಫ್ ಇಂಡಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ 2024ರ ಸಾಲಿನ ಇರಾನಿ ಕಪ್ ಕ್ರಿಕೆಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾದ ಆಲ್ರೌಂಡರ್ ಶಾರ್ದುಲ್ ಠಾಕೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿರುವ ಶಾರ್ದುಲ್ ಠಾಕೂರ್, ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ಸ್ ಮುಂಬೈ ಪರ ಆಡುತ್ತಿದ್ದಾರೆ.
ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದಲ್ಲಿ ಜ್ವರದ ನಡುವೆಯೂ ಮುಂಬೈ ಪರ ಬ್ಯಾಟಿಂಗ್ ಮಾಡಿದ್ದ ಶಾರ್ದುಲ್ ಠಾಕೂರ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಮಾಹಿತಿ ಹೊರಹಾಕಿವೆ.