ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ 5 ವರ್ಷಗಳು ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು 5 ವರ್ಷ ಪೂರೈಸಿದ್ದೇನೆ. ಈ ನಿಟ್ಟಿನಲ್ಲಿ, ನಮ್ಮ ಪಕ್ಷದ ಶಾಸಕರನ್ನು ಒಂದೆಡೆ ಸೇರಿಸಿ, ಔತಣಕೂಟ ಆಯೋಜಿಸಿದ್ದೇನೆ. ನೀವೆಲ್ಲಾ ಬರಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇಷ್ಟು ದಿನ ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಹೆಚ್.ಸಿ. ಮಹಾದೇವಪ್ಪ ಆದಿಯಾಗಿ ಯಾರೇ ಔತಣಕೂಟ ನಡೆಸಿದರೂ ಹೈಕಮಾಂಡ್ ನಾಯಕರಿಗೆ ದೂರು ನೀಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರೇ ಈಗ ಔತಣಕೂಟ ಆಯೋಜಿಸಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.ಈ ಹಿಂದೆ ಯಾರೇ ಔತಣಕೂಟ ಅಂದರೂ, ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಡಿಕೆಶಿವಕುಮಾರ್ ಇಂದು ಅವರೇ ಔತಣಕೂಟ ಆಯೋಜಿಸಿದ್ದಾರೆ. ಇದು ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಪರೋಕ್ಷವಾಗಿ ರವಾನೆ ಮಾಡಿದೆ. ಒಂದು ಕಡೆ ಸಿಎಂ ಸಿದ್ಧರಾಮಯ್ಯ ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನಾರಚನೆಗೆ ಕೈ ಹಾಕಲಿದ್ದಾರೆ ಎಂಬ ಮಾಹಿತಿ ಡಿಕೆಶಿಗೆ ಸಿಕ್ಕಿದ್ದು, ತನ್ನ ಶಕ್ತಿ ಪ್ರದರ್ಶನ ಈಗ ಆಗಲೇಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ.
ಇನ್ನೊಂದೆಡೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತನ್ನ ಪರ ಎಷ್ಟು ಶಾಸಕರು ಇದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು.ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದು, ಒಂದು ವೇಳೆ ಏನಾದ್ರೂ ಇದೇ ವಿಚಾರ ಮುನ್ನೆಲೆಗೆ ಬಂದರೆ, ತಮ್ಮ ಬೆಂಬಲಕ್ಕೆ ನಿಲ್ಲವ ಶಾಸಕರುಗಳು ಯಾರ್ಯಾರು?, ಎಷ್ಟು ಶಾಸಕರು ನನ್ನ ಪರವಿದ್ದಾರೆ ಎಂದು ಹೆಡ್ ಕೌಂಟ್ ಇಂದಿನ ಔತಣಕೂಟದಲ್ಲಿ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಾರೆ, ಅಂದು ಔತಣಕೂಟ ಬೇಡ ಎಂದಿದ್ದ ಡಿಕೆಶಿ ಅವರೇ ಇಂದು ಔತಣಕೂಟ ಆಯೋಜನೆ ಮಾಡಿದ್ದು, ಸಿಎಂ ಸಿದ್ಧರಾಮಯ್ಯರ ಬಜೆಟ್ ಮಂಡನೆ ಬಳಿಕ ಕಾಂಗ್ರೆಸ್ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.