ಮಾಗಡಿ: ತಾಲ್ಲೂಕಿನಲ್ಲಿ ಸಾಕಷ್ಟು ವರ್ಷಗಳಿಂದ ನಮೂನೆ 50:53 ರಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣರವರ ಸೂಚನೆ ಮೇರೆಗೆ ಭೂಮಿ ಮಂಜೂರಾತಿ ಮಾಡಿ ಹಕ್ಕುಪತ್ರವನ್ನು ಇನ್ನು 6 ತಿಂಗಳಲ್ಲಿ ವಿತರಿಸಲಾಗುತ್ತದೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾದ್ಯಕ್ಷರು ಬಗರ್ ಹುಕುಂ ಕಮಿಟಿ ನಿರ್ದೇಶಕ ಆಗ್ರೋ ಪುರುಷೋತ್ತಮ್ ಸ್ಪಷ್ಟನೆ ನೀಡಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವು ಬಡವರು,ದೀನದಲಿತರ ಪರವಾಗಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಶ್ರಮಿಸುತ್ತಿದೆ.ಅದರಂತೆ ಹಿಂದೆ ಸಿದ್ದರಾಮಯ್ಯ ಅವರು 2013 ರಿಂದ 2018 ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪರವರು ಬಡವರು ಗೋಮಾಳದಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಸ್ವಾಧಿನದಲ್ಲಿರುವ ಅರ್ಹ ಫಲಾನುಭವಿಗಳಿಗೆ ಜಮೀನಿನ “ಹಕ್ಕುಪತ್ರ”ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದರು.
ತದನಂತರ ಅಧಿಕಾರಕ್ಕೆ ಬಂದಂತಹ ಬಿಜೆಪಿ ಸರಕಾರವು ಬಗರ್ ಹುಕುಂ ಸಾಗುವಳಿ ಕಮಿಟಿಯನ್ನೇ ರಚನೆ ಮಾಡದೇ ಉಳುಮೆದಾರರಿಗೆ ಹಕ್ಕುಪತ್ರ ವಿತರಣೆ ಮಾಡಲು ಮುಂದಾಗಿರಲಿಲ್ಲ.ನಂತರ 2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಮಿಟಿ ರಚನೆ ಮಾಡಿ 50:53 ನಮೂನೆಯಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಖಾತೆ ಮಾಡಿಸಿ ಅವರಿಗೆ ಹಕ್ಕುಪತ್ರ ವಿತರಣೆ ಮಾಡುವ ಕೆಲಸವಾಗುತ್ತಿದ್ದು ಈಗಾಗಲೇ ತಾಲ್ಲೂಕಿನಲ್ಲಿ 150 ಕ್ಕೂ ಹೆಚ್ಚಿನ ಅರ್ಜಿಗಳನ್ನು ನೀಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಆರ್.ಐ.ಮತ್ತು ವಿ.ಎ.ರವರು ಸ್ಥಳಕ್ಕೆ ಭೇಟಿನೀಡಿ ನಿಜವಾದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಕೆಲಸವಾಗುತ್ತಿದ್ದು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಪ್ಪಸಂದ್ರ,ಕುದೂರು, ಕಸಬಾ, ಮಾಡಬಾಳ್, ಬಿಡದಿ, ಕೂಟಗಲ್ ಹೋಬಳಿಯ ರೈತರು ಸಲ್ಲಿಸಿರುವ ದಾಖಲಾತಿಗಳನ್ನು ಪಟ್ಟಣದ ಪುರಸಭೆಯ ಶಾಸಕರ ಕಚೇರಿಯಲ್ಲಿ ದಾಖಲಾತಿಗಳನ್ನು ನೀಡಿದರೆ ಅವುಗಳನ್ನು ಕೂಡಲೇ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಪುರುಷೋತ್ತಮ್ ಸ್ಪಷ್ಟಪಡಿಸಿದರು.
ಬಡವರಿಗೆ ಮತ್ತು ಕಟ್ಟಕಡೆಯ ಜನ ಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕೋಸ್ಕರವಾಗಿ ಬಗರ್ ಹುಕುಂ ಕಮಿಟಿ ರಚನೆಯಾಗಿರುವುದು.ಇದರಲ್ಲಿ ಬಡವ,ಬಲ್ಲಿದ,ಉಳ್ಳವ,ಶ್ರೀಮಂತ ಎನ್ನುವ ತಾರತಮ್ಯವಿಲ್ಲ.ಸರ್ವರನ್ನು ಸಮಾನ ದೃಷ್ಟಿಯಿಂದ ಕಾಣುವ ಮೂಲಕ ಪಾರದರ್ಶಕವಾಗಿ ಪ್ರಾಮಾಣಿಕತೆ
ಯಿಂದ ಜನ ಸಾಮಾನ್ಯರಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಮತ್ತೋರ್ವ ಬಗರ್ ಹುಕುಂ ಕಮಿಟಿ ನಿರ್ದೇಶಕ ಗೆಜ್ಜಗಾರಗುಪ್ಪೆ ಕುಮಾರ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಫಲಾನುಭವಿಗಳು ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಸೂಕ್ತ ದಾಖಲೆಗಳನ್ನು ಒದಗಿಸಿ ಇದರ ಸದುಪಯೋಗವನ್ನು ಈ ಸಮುದಾಯದವರು ಪಡೆದುಕೊಳ್ಳ ಬಹುದಾಗಿದೆ ಎಂದರು.ನಿರ್ದೇಶಕಿ ಚಂದ್ರಕಲಾ ರುದ್ರಾರಾದ್ಯ ಇದ್ದರು.