ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ರಾಜಾಜಿನಗರ 6ನೇ ಬ್ಲಾಕ್ 12ನೇ ಎ ಮುಖ್ಯರಸ್ತೆಯಲ್ಲಿ ನೂತನವಾಗಿ ಕೊರೆಯಲಾಗಿರುವ ಕೊಳವೆ ಬಾವಿಯನ್ನು ಶಾಸಕ ಪ್ರಿಯಕಷ್ಣ ಉದ್ಘಾಟಿಸಿದರು.ಈ ಕೊಳವೆ ಬಾವಿಯ ಮೂಲಕ 12ನೇ ಎ ಮುಖ್ಯರಸ್ತೆ ಭಾಗದ ಮನೆ ಮನೆಗಳಿಗೆ ನೀರು ಒದಗಿಸುವ ಕೆಲಸಕ್ಕೂ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಾದ್ಯಂತ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗಿದೆ. ಸಮರೋಪಾದಿಯಲ್ಲಿ ಬೋರ್ವೆಲ್ಗಳನ್ನು ಕೊರೆಸುವ ಮೂಲಕ ತಕ್ಷಣಕ್ಕೆ ನೀರಿನ ಸಮಸ್ಯೆಯನ್ನು ಆದಷ್ಟೂ ತಗ್ಗಿಸಲು ಗಂಭೀರ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ, ಡಾಂಬರೀಕರಣ, ಸಿಸಿ ರಸ್ತೆಗಳು. ಚರಂಡಿಗಳ ಹೂಳೆತ್ತುವ, ಕ್ರೀಡಾಂಗಣಗಳ, ಉದ್ಯಾನವನಗಳ ಉನ್ನತೀಕರಣ ಕಾಮಗಾರಿಗಳು ನಡೆಯುತ್ತಿವೆ ಎಂದರು. ವೈಟ್ ಟಾಪಿಂಗ್ ಕೆಲಸ ಬಹಳಷ್ಟು ವೇಗವಾಗಿ ನಡೆಯುತ್ತಿದೆ.
ಅದಷ್ಟು ಬೇಗ ವೈಟ್ ಟಾಪಿಂಗ್ ಕಾಮಗಾರಿ ಮುಗಿದ ಕೂಡಲೇ ಮುಂದಿನ 15 ದಿನಗಳ ನಂತರ ಅಗ್ರಹಾರ ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ವತಿಯಿಂದ ಜಲಮಂಡಳಿಯ ಹಳೆಯ ಪೈಪ್ಲೈನ್ ತೆರವುಗೊಳಿಸಿ ಹೊಸ ಪೈಪ್ಲೈನ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ವೇಳೆ ಬಿಬಿಎಂಪಿ, ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಸಂಚಾರಿ ಪೊಲೀಸ್ ಅಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಡಿಸಿಸಿ ಸದಸ್ಯರು, ಮಹಿಳಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.