ಬೆಂಗಳೂರು: ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಹನಿಟ್ರ್ಯಾಪ್ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದ ಆರೋಪದಡಿ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು ಸಿಐಡಿಯ ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಗುರುವಾರ ರಾತ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಐಯಣ್ಣ ರೆಡ್ಡಿ ಅವರನ್ನು ವಶಕ್ಕೆ ಪಡೆದ ಎಸ್ಐಟಿ ತನಿಖಾಧಿಕಾರಿಗಳು, ವಿಚಾರಣೆ ಬಳಿಕ ಬಂಧನಕ್ಕೊಳಪಡಿಸಿದರು.
ಆರೋಪಿಗಳು ನಡೆಸುತ್ತಿದ್ದ ಹನಿಟ್ರ್ಯಾಪ್ಗೆ ಇನ್ಸ್ಪೆಕ್ಟರ್ ನೆರವು ನೀಡಿದ್ದರು. ಅಲ್ಲದೇ ಆರೋಪಿಗಳು ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ ಇನ್ಸ್ಪೆಕ್ಟರ್ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪದಡಿ ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಯುವಕನೊಬ್ಬನ ಮನವೊಲಿಸಲು ಆರೋಪಿಗಳು ಯತ್ನ ನಡೆಸಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಯುವಕನ ಹೇಳಿಕೆಯನ್ನು ದಾಖಲಿಸಿದ ನಂತರ, ಎಸ್ಐಟಿ ಅಧಿಕಾರಿಗಳು ಪೊಲೀಸ್ ಠಾಣೆಯಿಂದಲೇ ಇನ್ಸ್ಪೆಕ್ಟರ್ನನ್ನು ಬಂಧನಕ್ಕೊಳಪಡಿಸಿದ್ದಾರೆ.
ಶುಕ್ರವಾರ ಇನ್ಸ್ಪೆಕ್ಟರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ, ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆಯನ್ನು ಸರ್ಕಾರವು ಎಸ್ಐಟಿ ವಹಿಸಿತ್ತು.
ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ದೂರುದಾರರು, ತಮ್ಮ ವಿರೋಧಿಗಳನ್ನು ಹನಿ ಟ್ರ್ಯಾಪ್ ಮಾಡಲು ಶಾಸಕ ಎಚ್ಐವಿ ಸೋಂಕಿತ ಮಹಿಳೆಯನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದರು.
ಇನ್ನು ಪ್ರಕರಣ ಸಂಬಂಧ ಇದೀಗ ಬಂಧನಕ್ಕೊಳಗಾಗಿರುವ ಐಯಣ್ಣ ರೆಡ್ಡಿ ಅವರು, ಕಬ್ಬನ್ಪಾರ್ಕ್, ರಾಜಗೋಪಾಲನಗರ, ಯಶವಂತಪುರ, ಪೀಣ್ಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಹೆಚ್ಚಿನ ವರ್ಷ ಕೆಲಸ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.