ಬೆಳಗಾವಿ: ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ವಿಧಾನಸಭೆ ಕಲಾಪ ಕೆಲ ಕಾಲ ಮುಂದೂಡಿದರೆ ಪರಿಷತ್ನಲ್ಲಿ ಚರ್ಚೆಗೆ ಆಗ್ರಹಿಸಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ ವಿಧಾನ ಸಭೆ ಕಲಾಪದ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರು ಅಮಿತ್ ಶಾ ಆಡಿರುವ ಮಾತುಗಳನ್ನು ಪ್ರಸ್ತಾಪಿಸಿ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಶಾ ವಿರುದ್ಧ ಆಕ್ರೋಶ ªಹೊರ ಹಾಕಿದ್ದಾರೆ.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಜೋರಾಗಿದ್ದನ್ನು ಗಮನಿಸಿದ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು.ಮತ್ತೊಂದೆಡೆ ವಿಧಾನ ಪರಿಷತ್ನಲ್ಲೂ ಸಹ ಇದೇ ವಿಷಯ ಪ್ರಸ್ತಾಪವಾಗಿ ಸದನ ಕಲಾಪ ಆರಂಭವಾದ ಬೆನ್ನಲ್ಲೇ ಗದ್ದಲ ಗೊಂದಲ ಉಂಟಾಯಿತು.ಅಮಿತ್ ಶಾ ರ ಹೇಳಿಕೆ ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸುತ್ತಿದ್ದಂತೆ ಇದನ್ನು ಕಂಡು ಬಿಜೆಪಿ ಸದಸ್ಯರು ಗರಂ ಆದರು.ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಹಿಡಿತಕ್ಕೆ ತೆಗೆದುಕೊಂಡು ನಾನು ಎಲ್ಲರಿಗೂ ಅವಕಾಶ ಕೊಡುತ್ತೇನೆ ಎಂದು ಪರಿಸ್ಥಿತಿಯನ್ನು ತಹಬದಿಗೆ ತಂದರು.
ಸಭಾಪತಿಯವರ ಮಾತಿಗೆ ಮರು ಪ್ರಶ್ನಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಮಾನ್ಯ ಸಭಾಪತಿಗಳೇ, ನಮಗೆ ಮಾತನ್ನಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು.ಕೊಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರೂ ಸಹ ಮಾತು ಮುಂದುವರೆಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು, ನನದೊಂದು ಬೇಡಿಕೆ ಇದೆ. ಮಾನ್ಯ ಕೇಂದ್ರ ಗೃಹ ಸಚಿವರು ಮಾತನ್ನಾಡಿರುವುದು ಸಾರ್ವಜನಿಕವಾಗಿ ಅಲ್ಲ. ಸದನದಲ್ಲಿ. ಹೀಗಾಗಿ, ಅವರು ಸದನದಲ್ಲಿ ಆಡಿರುವ ಮಾತನ್ನು ಇಲ್ಲಿ ಪ್ರಸಾರ ಮಾಡಿ. ಬಳಿಕ ಅದರ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.ಸಿ.ಟಿ.ರವಿ ಮಾತಿಗೆ ಆಗಲಿ ಈಗ ಕುಳಿತುಕೊಳ್ಳಿ ಎಂದ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿ, ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.