ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ, ಅವರ ಹೆಸರನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರ ಅವರ ಆಡಳಿತ ಅವಧಿಯಲ್ಲಿ ಎಲ್ಲಾ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯ ಇತ್ತು. ರಾಜರಾಗಿ ಅವರು ಎಲ್ಲಾ ಧರ್ಮಗಳ ಪರ ನಿಂತಿದ್ದರು.
ಸರ್ವ- ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಎಲ್ಲಾ ಸಮುದಾಯದ ಗೌರವಾನ್ವಿತ ವ್ಯಕ್ತಿಗಳಿಗೆ ಅವರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿದ್ದರು. ಇಂದು ಅವರ ಹೆಸರನ್ನು ಕೇಸರಿಕರಣಗೊಳಿಸುತ್ತಿರುವುದು ಸರಿಯಲ್ಲ. ಹೀಗಾಗಿ ಪ್ರತಿಯೊಬ್ಬರು ಶಿವಾಜಿ ಅವರ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇಡೀ ದೇಶದಲ್ಲಿ ಶಿವಾಜಿ ಮಹಾರಾಜರು ತನ್ನದೇ ಆದ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಇಂತಹ ಅಪ್ರತಿಮ ದೇಶಭಕ್ತನ ಜಯಂತಿ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು.
25 ಲಕ್ಷದಿಂದ 50 ಲಕ್ಷಕ್ಕೆ ನೆರವು: ಇನ್ನು ಇಂತಹ ಸಂದರ್ಭದಲ್ಲಿ ಸಾಹು ಮಹಾರಾಜರನ್ನು ನಾವು ನೆನೆಯುವ ಅಗತ್ಯವಿದೆ. ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದವರು ಸಾಹು ಮಹಾರಾಜರು. ತುಳಿತಕ್ಕೆ ಒಳಗಾದ ಸಮಾಜವನ್ನು ಮೇಲೆತ್ತಿದ್ದ ಮೊಟ್ಟ ಮೊದಲ ರಾಜ ಸಾಹು ಮಹಾರಾಜರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ವಿದೇಶಿ ವ್ಯಾಸಂಗ ಮಾಡಲು ನೆರವು ನೀಡಿದ್ದರು. ಹೀಗಾಗಿ ಬಡವರ ಮಕ್ಕಳು ವಿದೇಶಿ ವ್ಯಾಸಂಗಕ್ಕೆ ಮಾಡಲು ನೀಡಲಾಗುತ್ತಿದ್ದ ಮೊತ್ತವನ್ನು 25 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಸಚಿವನಾದ ವೇಳೆ ಕೇವಲ 100 ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಅವಕಾಶವಿತ್ತು. ಇದೀಗ ಆ ಸಂಖ್ಯೆಯನ್ನು 1000 ವಿಶ್ವ ವಿದ್ಯಾಲಯಗಳಿಗೆ ಅನುಮತಿ ಕೊಡಿಸಲಾಗಿದೆ. ಶ್ರೀಮಂತರ ಮಕ್ಕಳು ಐಎಎಸ್, ಐಪಿಎಸ್ ಆಗುವುದು ವಿಶೇಷತೆ ಅಲ್ಲ. ಈ ದೇಶದ ಕಟ್ಟಕಡೆಯ ವ್ಯಕ್ತಿಯ ಮಕ್ಕಳು ಉನ್ನತ ಪದವಿ ಪಡೆದರೆ ಅದು ಸಾಧನೆ ಎಂದು ಹೇಳಿದರು.
ಎಲ್ಲ ಸಮಾಜದಲ್ಲೂ ಶ್ರೀಮಂತರಿಲ್ಲ. ಹಿಂದುಳಿದ ವರ್ಗಗಳ ಬಗ್ಗೆ, ಸಾಮಾನ್ಯ ಜನರ ಬಗ್ಗೆ ಚಿಂತನೆ ನಡೆಯುತ್ತಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾತ್ರ. ಇನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಮರಾಠ ಅಭಿವೃದ್ಧಿ ನಿಗಮಕ್ಕೆ 185 ಕೋಟಿ ರೂ.ಅನುದಾನ ನೀಡಿದ ಕೀರ್ತಿ ಮುಖ್ಯಮಂತ್ರಿ ಅವರಿಗೆ ಸಲ್ಲುತ್ತದೆ ಎಂದು ಸಚಿವರು ಶ್ಲಾಘಿಸಿದರು.
ಮರಾಠ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಶೇ.85ರಷ್ಟು ಗುರಿ ಸಾಧಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಲಾಗುವುದು. ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ನಮ್ಮ ಅವಧಿಯಲ್ಲಿ ಈಗಾಗಲೇ ಒಂಭತ್ತು ಸಾವಿರ ಕೊಳವೆ ಬಾವಿ ಕೊರೆದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಸಾಂಬಾಜಿ ಅವರ ಸಮಾಧಿ ನಾನು ಪ್ರತಿನಿಧಿಸುವ ಕನಕಗಿರಿ ಕ್ಷೇತ್ರದಲ್ಲಿ ಇದೆ ಎಂಬುದನ್ನು ನನ್ನ ಗಮನಕ್ಕೆ ಬಂದಿದೆ. ಸಾಂಬಾಜಿ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.ವಿತರಣೆ: ಇದೇ ವೇಳೆ ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸಾರಥಿ ಯೋಜನೆಯಡಿ ಕಾರುಗಳನ್ನು ಸಚಿವರು ವಿತರಿಸಿದರು. ಸಮಾರಂಭದಲ್ಲಿ ಶಾಸಕ ಉದಯ್ ಬಿ.ಗರುಡಾಚಾರ್, ವಿಧಾನಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಸಾಹಿತಿ ಜಗನ್ನಾಥರಾವ್ ಬಹುಳೆ, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.