ಬೆಂಗಳೂರು/ದೆಹಲಿ: ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲಾಗಿರುವ ಸ್ಥಿತಿ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯಲ್ಲಿ ಗೌಪ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್. ಭೇಟಿಯಾಗಿದ್ದಾರೆ.ನಿನ್ನೆ ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿ ರಾಜ್ಯ ಬಿಜೆಪಿ ಸ್ಥಿತಿಗತಿಗಳನ್ನು ಶೆಟ್ಟರ್ ಅವರು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಹಾಗಾದ್ರೆ, ನರೇಂದ್ರ ಮೋದಿ ಭೇಟಿಯ ವೇಳೆ ಜಗದೀಶ್ ಶೆಟ್ಟರ್ ಹೇಳಿರುವ ವಿಚಾರಗಳೆಂದರೆ, ರಾಜ್ಯ ಬಿಜೆಪಿಯಲ್ಲಿನ ಸ್ಥಿತಿ ಸರಿಯಾಗಿಲ್ಲ. ಇಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ. ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಸಮನ್ವಯತೆ ಇಲ್ಲ, ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಿಲ್ಲ ಎಂದಿದ್ದಾರೆ.ಯತ್ನಾಳ್ ಬಣದ ನಡೆ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದೆ.
ಇದೆಲ್ಲಾವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ಮುಂದಾಗಬೇಕು. ಸದ್ಯದಲ್ಲೇ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಎದುರಾಗಲಿದೆ. ಈ ಸಂದರ್ಭದಲ್ಲಿ ಗೊಂದಲಗಳು ನಿರ್ಮಾಣವಾದ್ರೆ ಸರಿಯಾಗುವುದಿಲ್ಲ. ಇನ್ನು ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರಲ್ಲೂ ಉತ್ಸಾಹ ಕಾಣುತ್ತಿಲ್ಲ. ಇದು ಹೀಗೆ ಮುಂದುವರೆದ್ರೆ, 2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ನಮಗೆ ಹಿನ್ನಡೆಯಾಗಬಹುದು ಎಂದು ಪಕ್ಷದಲ್ಲಿ ನಡೆಯುತ್ತಿರುವ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ.ಈ ಎಲ್ಲಾ ಅಂಶಗಳ ಕಾರಣ, ಹೈಕಮಾಂಡ್ ನಾಯಕರು ತಕ್ಷಣವೇ ಈ ಗೊಂದಲಕ್ಕೆ ಬ್ರೇಕ್ ಹಾಕಬೇಕೆಂದು ಜಗದೀಶ್ ಶೆಟ್ಟರ್ ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.