ಬೆಂಗಳೂರು: ಕರ್ನಾಟಕದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಜನರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳುವೆ ನಡೆಸುತ್ತಿದ್ದಾರೆ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸೋಣ.
ಶ್ರೀಮಂತ ಸಂಸ್ಕೃತಿ ಹಾಗು ಸಾಂಸ್ಕೃತಿಕ ಪರಂಪರೆ, ಸುಂದರವಾದ ನೈಸರ್ಗಿಕ ಸ್ಥಳಗಳ ತವರೂರು ಮತ್ತು ನೂರಾರು ಕಲೆಗಳ ನೆಲೆಬೀಡಾಗಿರುವ ಕನ್ನಡ ನಾಡು ಸದಾ ಬೆಳಗಲಿ. ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಪಣ ತೊಡೋಣ ಎಂದು ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್.ಪಿ.ಕಾರ್ತಿಕ್ ತಿಳಿಸಿದರು.
ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರಿಂದ ಹಿಡಿದು ಕನ್ನಡದ ಆದಿ ಕವಿಗಳಾದ ಪಂಪ, ಪೊನ್ನ ಮತ್ತು ರನ್ನ ಇದೇ ಮಾತು ಹೇಳಿದ್ದಾರೆ. ಕರ್ನಾಟಕದ ಬೆಳವಣಿಗೆಯಲ್ಲಿ ದುಡಿದು ಮಾಡಿದವರನ್ನು ಸ್ಮರಿಸಬೇಕಾದ ಆದ್ಯ ಕರ್ತವ್ಯ ನಮ್ಮದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದತ್ತಶ್ರೀ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು, ಅಂತರರಾಷ್ಟ್ರೀಯ ಖ್ಯಾತಿಯ ಸುಗಮ ಸಂಗೀತ ಗಾಯಕರಾದ ಸಂತವಾಣಿ ಸುಧಾಕರ್ ಮಾತನಾಡಿ ಕರ್ನಾಟಕದ ಮನೆಮನೆಗಳಲ್ಲಿ ಕನ್ನಡ ನಮ್ಮ ಬದುಕಾಗಲಿ , ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡ ಕಲಿಯೋಣ, ಕಲಿಸೋಣ, ಕನ್ನಡ ಉಳಿಸಿ, ಬೆಳೆಸಿ, ಪ್ರೋತ್ಸಾಹಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂತವಾಣಿ ಸುಧಾಕರ್ ಮತ್ತು ಖ್ಯಾತ ಗಾಯಕಿ ಕು.ದತ್ತಶ್ರೀ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಜನಪ್ರಿಯ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ ವೃಂದದವರಿಗೆ ಮನಸೂರೆಗೊಂಡರು. ಇದೇ ಸಂದರ್ಭದಲ್ಲಿ ಸಂತವಾಣಿ ಸುಧಾಕರ್ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ .ಆರ್.ವಿ.ಮಂಜುನಾಥ್ ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರಾಮಲಿಂಗೇಶ್ವರ್ ಎಲ್ಲರನ್ನೂ ಸ್ವಾಗತಿಸಿದರು, ಉಪನ್ಯಾಸಕರಾದ ಪ್ರೊ .ಬಿ.ಎನ್.ಮಧು ನಿರೂಪಿಸಿದರು, ಡಾ.ಹೆಚ್.ಕಾವ್ಯಶ್ರೀ ಅತಿಥಿಗಳನ್ನು ಪರಿಚಯಿಸಿದರು, ಡಾ .ಕೆ.ವಿ.ಕೃಷ್ಣ ವಂದಿಸಿದರು. ಕು. ಕೀರ್ತನ ಮತ್ತು ತಂಡದವರ ನೃತ್ಯ, ಕು.ಮಾನಸ ತಂಡದವರ ಗಾಯನ ಮನಸೂರೆಗೊಂಡವು.