ಕೊಪ್ಪಳ: ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆ ತೆರಳಿದ್ದ ವಿದ್ಯಾರ್ಥಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿದ್ದ ಘಟನೆ ಭಟ್ಕಳದಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಶಿಕ್ಷಕರನ್ನು ಅಮಾನತು ಮಾಡಿ ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದರ್ ಆದೇಶ ಹೊರಡಿಸಿದ್ದಾರೆ.
ಗಾಣಗಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರು ವಿದ್ಯಾರ್ಥಿಗಳು ಮತ್ತು ಹದಿಮೂರು ಶಿಕ್ಷಕರು ಡಿಸೆಂಬರ್ 18 ರಂದು ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರು. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಾತ್ರೆಗಳನ್ನು ಖರೀದಿಸಲು ಬಸ್ ನಿಲ್ಲಿಸಿದಾಗ ಕೆಲ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆಗೆ ಮೆಡಿಕಲ್ ಶಾಪ್ ಹಿಂಭಾಗದಲ್ಲಿ ಹೋಗಿದ್ದರು. ಆದರೆ ಬಾವಿ ಇರುವುದು ಗೊತ್ತಾಗದೇ ನಿರುಪಾದಿ ಹರಿಜನ್ ಎಂಬ ವಿದ್ಯಾರ್ಥಿ ಬಾವಿಗೆ ಬಿದ್ದಿದ್ದ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನಿರುಪಾದಿ ಜೀವ ಉಳಿಸಲು ಪ್ರಯತ್ನಿಸಿದರು ಫಲಪ್ರದವಾಗಿರಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ಸೇರಿ ಆರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಡಿಸೆಂಬರ್ 18ರ ರಾತ್ರಿ ಗಾಣದಾಳದಿಂದ ಎರಡು ಬಸ್ಗಳಲ್ಲಿ ಹೊರಟಿದ್ದ ವಿದ್ಯಾರ್ಥಿಗಳು ಡಿಸೆಂಬರ್ 19ರ ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿಕೊಂಡು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ಕೊಲ್ಲೂರಿಗೆ ತೆರಳುತ್ತಿದ್ದರು.
ಪ್ರಯಾಣದ ಮಧ್ಯ ಭಟ್ಕಳ ತಾಲೂಕು ಪಂಚಾಯತ್ ಕಚೇರಿ ಮುಂಭಾಗದ ಔಷಧಿ ಅಂಗಡಿಯ ಮುಂದೆ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ಕೆಲವು ಬಾಲಕರು ಮೂತ್ರ ವಿಸರ್ಜನೆಗಾಗಿ ಔಷಧಿ ಅಂಗಡಿ ಹಿಂದಿರುವ ಖಾಲಿ ಜಾಗಕ್ಕೆ ತೆರಳಿದ್ದಾರೆ. ಆದರೆ ಕತ್ತಲಾಗಿದ್ದರಿಂದ ವಿದ್ಯಾರ್ಥಿಗೆ ತಡೆಗೋಡೆ ಇಲ್ಲದ ಬಾವಿ ಕಂಡಿಲ್ಲ. ಅವಸರಲ್ಲಿ ಹೋಗಿ ಬಾವಿಯೊಳಗೆ ಬಿದಿದ್ದ.
ಆತ ಬಾವಿಗೆ ಬಿದ್ದ ತಕ್ಷಣ ಜೊತೆಗಿದ್ದ ವಿದ್ಯಾರ್ಥಿಗಳು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಬಿದ್ದಿದ್ದ ವಿದ್ಯಾರ್ಥಿಯನ್ನು ಮೇಲಕ್ಕೆ ಎತ್ತಿದ್ದಾರೆ. ಆದರೆ ಅಷ್ಟರಲ್ಲಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದ.