ಬ್ರಿಜ್ಟೌನ್: ಈ ತಿಂಗಳ ಅಂತ್ಯದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ನಿಗದಿತ ಓವರ್ಗಳ ಕ್ರಿಕೆಟ್ ಸರಣಿ ಹೊತ್ತಿಗೆ ಭಾರತ ತಂಡಕ್ಕೆ ಹೊಸ ಮುಖ್ಯ ಕೋಚ್ ಸೇರ್ಪಡೆಯಾಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ.
ಆದರೆ, ಹೆಡ್ ಕೋಚ್ ಹುದ್ದೆಗೆ ಯಾರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಬಗ್ಗೆ ಶಾ ಗುಟ್ಟು ಬಿಟ್ಟುಕೊಟ್ಟಿಲ್ಲ.ಟಿ-20 ವಿಶ್ವಕಪ್ ಟೂರ್ನಿಗೆ ರಾಹುಲ್ ದ್ರಾವಿಡ್ ಅವರ ಅವಧಿ ಅಂತ್ಯಗೊಂಡಿದ್ದು, ಗೌತಮ್ ಗಂಭೀರ್ ಅವರು ದ್ರಾವಿಡ್ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ. ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಈ ಸಂಬಂಧ ಸಂದರ್ಶನ ನಡೆಸಿದ್ದು, ಗೌತಮ್ ಗಂಭೀರ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ಡಬ್ಲ್ಯು.ವಿ. ರಮಣ್ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಹೆಡ್ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ.
ಆಯ್ಕೆ ಸಮಿತಿ ಅಧ್ಯಕ್ಷರನ್ನೂ ನೇಮಕ ಮಾಡಲಾಗುವುದು ಎಂದು ಶಾ ಹೇಳಿದ್ದಾರೆ.‘ಹೆಡ್ ಕೋಚ್ ಮತ್ತು ಆಯ್ಕೆಗಾರರು ಇಬ್ಬರನ್ನೂ ಶೀಘ್ರ ನೇಮಕ ಮಾಡಲಾಗುವುದು. ಕ್ರಿಕೆಟ್ ಆಯ್ಕೆ ಸಮಿತಿಯು(ಸಿಎಸಿ) ಸಂದರ್ಶನ ನಡೆಸಿ ಎರಡು ಹೆಸರುಗಳನ್ನು ಅಂತಿಮಗೊಳಿಸಿದೆ. ಮುಂಬೈ ತೆರಳಿದ ಬಳಿಕ ಅವರ ನಿರ್ಣಯದಂತೆ ನೇಮಕ ನಡೆಯಲಿದೆ. ಜಿಂಬಾಬ್ವೆ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ತಂಡದ ಜೊತೆ ತೆರಳಲಿದ್ದು, ಶ್ರೀಲಂಕಾ ಸರಣಿ ಹೊತ್ತಿಗೆ ಹೊಸ ಕೋಚ್ ನೇಮಕವಾಗಲಿದ್ದಾರೆ’ಎಂದು ಶಾ ಹೇಳಿದ್ದಾರೆ.ಜುಲೈ 6 ರಿಂದ ಜಿಂಬಾಬ್ವೆ ಸರಣಿ ಆರಂಭವಾಗಲಿದ್ದು, ಜುಲೈ 27ರಿಂದ ಶ್ರೀಲಂಕಾ ಸರಣಿ ನಡೆಯಲಿದೆ.