ದಾಸವರೇಣ್ಯ ಶ್ರೀವಿಜಯದಾಸರ ಆರಾಧನೆ ಅಂಗವಾಗಿ ಉಡುಪಿಯಲ್ಲಿ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ `ವಿಜಯವಿಟ್ಠಲ’ ಕೃತಿ ಪರ್ಯಾಯ ಪೀಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥರಿಂದ ಬಿಡುಗಡೆಯಾಯಿತು.
ಅಲಂಕೃತ ಚೆಲುವ ಮುದ್ದುಬಾಲಕೃಷ್ಣನ ಹಾಗೂ ಶ್ರೀವಿಜಯದಾಸರ ಚಿತ್ರದೊಂದಿಗೆ ಇರುವ ಈ ಕೃತಿಯ ಮುಖಪುಟ ಬಹಳ ಆಪ್ಯಾಯಮಾನವಾಗಿದ್ದು, ವರ್ಣರಂಜಿತವಾಗಿದೆ. ಈ ಕೃತಿ ದಾಸಸಾಹಿತ್ಯಾಸಕ್ತರ ಲೇಖನಗಳ ಪ್ರಬಂಧ ಸಂಕಲನ. ಕನ್ನಡದಲ್ಲಿ ನಲವತ್ತೇಳು ಪ್ರಬಂಧಗಳು, ಇಂಗ್ಲೀಷ್ನಲ್ಲಿ ಮೂರು ಪ್ರಬಂಧಗಳನ್ನೊಳಗೊಂಡ, 300ಕ್ಕೂ ಹೆಚ್ಚು ಪುಟಗಳಿರುವ ಈ ಸುಂದರ ಪುಸ್ತಕದ ಪ್ರಧಾನ ಸಂಪಾದಕರಾಗಿ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ಯರು ಹಾಗೂ ಸಂಪಾದಕರಾಗಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಸಮರ್ಥವಾಗಿ ನಿರ್ವಹಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ವಿಜಯವಿಟ್ಠಲ ಕೃತಿಯಲ್ಲಿ ಪ್ರಸ್ಥಾನತ್ರಯಗಳ ಸಾರ, ರಜತಪೀಠ ಪುರಾಧಿವಾಸ ಮಧ್ವೇಶಕೃಷ್ಣ, ಗೋಪೀಚಂದನದಲ್ಲಿ ಬಂದವ – ಈ ರಚನೆಯಲ್ಲಿ ಕೃಷ್ಣ ಉಡುಪಿಗೆ ಹೇಗೆ ಬಂದ, ಅದರ ಹಿನ್ನೆಲೆ, ರಣದೊಳಗರ್ಜುನನ ತನು ಉಳುಹಿದಾ ಮೂರುತಿ, ಸುಳಾದಿಗಳ ಹೊಂಬೆಳಕು, ಲಕ್ಷಾಂತರ ಜನರ ಬಾಯಿಪಾಠವಾಗಿರುವ ಶ್ರೀವಿಜಯಕವಚ, ಶ್ರೀಶೈಲ ಕ್ಷೇತ್ರ ಸುಳಾದಿ ಎನ್ನುವ ಶೀರ್ಷಿಕೆಯ ಆಕರ್ಷಕ ಪ್ರಬಂಧಗಳು ಭಾವಪೂರ್ಣವಾಗಿವೆ. ಅವು ಶ್ರೀವಿಜಯದಾಸರ ಕೃತಿಗಳ ಒಳಾರ್ಥವನ್ನು ಬಿಂಬಿಸುತ್ತದೆ.
ಉಡುಪಿಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ, ಉಡುಪಿ ಕೃಷ್ಣನ ಮಹಿಮೆ, ಉಡುಪಿ ಕ್ಷೇತ್ರದ ಸೊಬಗನ್ನು ಕಂಡಾಗ ಶ್ರೀವಿಜಯದಾಸರಿಗೆ ಆದ ಆನಂದ, ಪರಮಾನಂದ, ಉಡುಪಿ ಯಾತ್ರೆಯ ಮಹತ್ವ ಉಡುಪಿಯ ಕೃಷ್ಣಪ್ರಸಾದದ ಹಿರಿಮೆ, ತೀರ್ಥಕ್ಷೇತ್ರಗಳಲ್ಲಿ ಉಡುಪಿ ಕೃಷ್ಣನ ಬಗ್ಗೆ ಅವರು ರಚಿಸಿರುವ ಪದ ಸುಳಾದಿಗಳು `ಅಣುಮೂರುತಿ, ಪರಮಾಣು ಮೂರುತಿ’ ಎನ್ನುವ ಸುಳಾದಿಯಲ್ಲಿ ಉಡುಪಿ ಕೃಷ್ಣನನ್ನು ಕಂಡು ಬೆರಗಾಗಿ, ಬಣ್ಣಿಸಿರುವ ಅದ್ಭುತ ರೀತಿ, ಕೃಷ್ಣನನ್ನು ಸ್ತುತಿಸಿದರೆ ಹೇಗಿರಬೇಕು ಎನ್ನುವ ಕೃಷ್ಣನ್ನ, ಬಲು ಉತ್ಕೃಷ್ಟನ್ನ, ವಿಶಿಷ್ಟನ್ನ ರಚನೆಯ ವೈಶಿಷ್ಟ್ಯ ಮೊದಲಾದ ಸವಿವರ ಲೇಖನಗಳು, ಈ ಕೃತಿಯಲ್ಲಿದ್ದು ಸರ್ವಜನಮಾನ್ಯವಾಗಿದೆ. ಮಾಹಿತಿಪೂರ್ಣ ವಿಷಯಗಳ ಈ ಗ್ರಂಥ, ಎಲ್ಲರಿಗೂ ಆದರಣೀಯ ಹಾಗೂ ಆಸ್ವಾದಿಸಬೇಕಾದ ಉಪಯುಕ್ತ ಸಂಗ್ರಹಯೋಗ್ಯ ಗ್ರಂಥ.
ಅಪರೋಕ್ಷ ಜ್ಞಾನಿಗಳಾದ ಶ್ರೀವಿಜಯದಾಸರು ಆಧ್ಯಾತ್ಮ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಶಾಸ್ತ್ರಗಳ ಪ್ರಮೇಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡೀಕರಿಸಿ ಮಹದುಪಕಾರ ಮಾಡಿದ್ದಾರೆ. ವೇದ, ಉಪನಿಷತ್ತು, ಭಾಗವತ ಪುರಾಣ ಸೂತ್ರಗಳೆಲ್ಲಾ ಕನ್ನಡದ ಸುಳಾದಿಗಳಾಗಿ ವಿಜಯದಾಸರಿಂದ ಮೂಡಿಬಂದಿದೆ. ಹರಿನಾಮಸ್ಮರಣೆ, ಹರಿಸರ್ವೋತ್ತಮ ತತ್ವ ಭಕ್ತಿಸಾಹಿತ್ಯದ ಶಕ್ತಿಯನ್ನು ಶ್ರೀವಿಜಯದಾಸರು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.ಬೆನ್ನುಡಿ ನೀಡಿರುವ ವಿದ್ವಾನ್ ಎಂ. ಪ್ರಸನ್ನ ಆಚಯರವರು ಹೇಳಿರುವಂತೆ, `ವಿಜಯವಿಟ್ಠಲ’ ಕೃತಿ ಸಂಸ್ಕಾರ ಸಂಸ್ಕೃತಿ ಸಜ್ಜನಿಕೆ ಸದಾಚಾರಗಳ ಮೂಲಕ ಜಿಜ್ಞಾಸುಗಳಿಗೆ ಸಾಧನ ಮಾಡಿಸುವ ರಾಜಹಂಸವಿದ್ದಂತೆ ಎಂದಿರುವುದು ಸೂಕ್ತವಾಗಿದೆ.
ಕೃತಿಯ ವಿವರ: ವಿಜಯವಿಟ್ಠಲ (ಹರಿದಾಸ ಸಾಹಿತ್ಯ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನ) ಪ್ರಧಾನ ಸಂಪಾದಕರು: ಡಾ ಬಿ. ಗೋಪಾಲಾಚಾರ್ಯಸಂಪಾದಕರು : ಡಾ. ಗುರುರಾಜ ಪೋಶೆಟ್ಟಿಹಳ್ಳಿಪ್ರಕಾಶಕರು: ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನ ಶ್ರೀಪುತ್ತಿಗೆ ಮಠ, ಉಡುಪಿ. ಸಹಕಾರ : ಶ್ರೀ ಶ್ರೀನಿವಾಸ ಉತ್ಸವ ಬಳಗ, ಬೆಂಗಳೂರು ಪುಟ – 304, ಬೆಲೆ : ರೂ.200/- ಪ್ರತಿಗಳಿಗೆ