“ಸಂವಿಧಾನದ ಮೌಲ್ಯ ಮತ್ತು ಆಶಯ ಪ್ರತಿ ಭಾರತೀಯರ ರಕ್ತದಲ್ಲಿ ಬೆರೆತುಹೋಗಿದೆ. ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಸಂವಿಧಾನದ ಪರಿಕಲ್ಪನೆಯಿಂದ ಈ ದೇಶ ಇಷ್ಟು ಗಟ್ಟಿಯಾಗಿ ನೆಲೆ ನಿಂತಿದೆ ಮತ್ತು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ” ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಗೌರವಾನ್ವಿತ ನ್ಯಾಯಾಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಭಾರತೀಯ ಸಂವಿಧಾನದ ಅಡಿಯಲ್ಲಿ 75 ವರ್ಷಗಳ ಆಡಳಿತ: ಅಭ್ಯಾಸಗಳು ಮತ್ತು ಅನುಭವಗಳು” ವಿಷಯದ ಕುರಿತ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.”ಭಾರತ ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿ 75 ವರ್ಷಗಳು ಕಳೆದಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತ ದೇಶಕ್ಕೆ 75 ವರ್ಷ ಬಹಳ ಅಲ್ಪಾವಧಿ.ಈ 75 ವರ್ಷದಲ್ಲಿ ಭಾರತ ಅನೇಕ ಬದಲಾವಣೆಯ ಪರ್ವಗಳನ್ನು ಕಂಡಿದೆ.ಸ್ವಾತಂತ್ರ್ಯ ನಂತರದಲ್ಲಿ ಸದೃಡ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನದ ಅವಶ್ಯಕತೆ ಅರಿತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸಲಾಯಿತು.ಭಾರತದ ಸಂವಿಧಾನ ಸರಳ,ಸದೃಢ, ಸಮೃದ್ಧತೆಯಿಂದ ಕೂಡಿದೆ.ವಿಶ್ವದ ಯಾವುದೇ ದೇಶದ ಸಂವಿಧಾನವೂ ಭಾರತ ಸಂವಿಧಾನದಷ್ಟು ವಿಶಾಲತೆಯನ್ನು ಹೊಂದಿಲ್ಲ.
ಭಾರತಕ್ಕೆ ಸ್ಪಷ್ಟ ಮಾರ್ಗ ಮತ್ತು ಗುರಿಗಳನ್ನು ಅಂಬೇಡ್ಕರ್ರವರು ಸಂವಿಧಾನದ ಮೂಲಕ ಕಟ್ಟಿಕೊಟ್ಟಿದ್ದಾರೆ.ಇಂದು ಅಕ್ಕ ಪಕ್ಕದ ರಾಷ್ಟ್ರಗಳು ತತ್ತರಿಸಿಹೋಗಿದ್ದರೂ ಭಾರತ ಇನ್ನೂ ಸದೃಡವಾಗಿ ನಿಂತಿರುವದಕ್ಕೆ ಅಂಬೇಡ್ಕರ್ರವರು ಹಾಕಿ ಕೊಟ್ಟ ಅಡಿಪಾಯ ಕಾರಣ.ಈ ಕಾರಣಕ್ಕೆ ಪ್ರತಿಯೊಬ್ಬರು ಅಂಬೇಡ್ಕರ್ರವರನ್ನು ಸ್ಮರಿಸಬೇಕು ಎಂದು ತಿಳಿಸಿದರು.
“ಭಾರತೀಯ ಸಂವಿಧಾನ ಸಾರ್ವಕಾಲಿಕವಾಗಿದ್ದು,ಪ್ರತಿ ಹಂತದಲ್ಲೂ ಸ್ಪಷ್ಟತೆ ಸಾಧಿಸಿದೆ.ನ್ಯಾಯಾಂಗ, ಶಾಸಕಾಂಗ,ಕಾರ್ಯಾಂಗದ ಸ್ಪಷ್ಟ ಪರಿಕಲ್ಪನೆಯನ್ನು ಸಂವಿಧಾನ ನೀಡಿದೆ.ಹಳ್ಳಿಗಾಡಿನಲ್ಲಿ,ಕುಗ್ರಾಮದಲ್ಲಿರುವವರಿಗೆ ಸಂವಿಧಾನದ ವಿಧಿಗಳು,ಕಾನೂನಿನ ಸೆಕ್ಷನ್ಗಳು ಗೊತ್ತಿರದಿದ್ದರೂ ತನಗೆ ಸಮಸ್ಯೆ ಎದುರಾದಾಗ ಸಂವಿಧಾನದ ಅಡಿಯಲ್ಲಿ ನ್ಯಾಯ ಪಡೆಯಬಹುದು ಎಂಬ ಸಾಮಾನ್ಯ ಅರಿವಿದೆ.ಈ ದೇಶದ ಪ್ರತಿಯೊಬ್ಬರಲ್ಲೂ ಸಂವಿಧಾನ ಬೆರೆತು ಹೋಗಿದೆ.
ನಮಗಾಗಿಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವಿದೆ ಎಂಬ ವಿಶ್ವಾಸ ಮತ್ತು ನಂಬಿಕೆ ಪ್ರತಿ ಭಾರತೀಯರಲ್ಲೂ ಇದೆ.ಈ ನಂಬಿಕೆ,ವಿಶ್ವಾಸ,ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ನ್ಯಾಯಾಂಗ ವ್ಯವಸ್ಥೆ ಮಾಡಬೇಕು” ಎಂದು ಆಶಯ ವ್ಯಕ್ತಪಡಿಸಿದರು.”ಈ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಿಸಿದೆ.ಸಂವಿಧಾನದ ಅಡಿಯಲ್ಲೇ ಪ್ರತಿ ಚುನಾವಣೆಗಳು ನಡೆಯುತ್ತಿದ್ದು ಜನರ ಆಯ್ಕೆಯಂತೆ ಸರ್ಕಾರಗಳು ಆಡಳಿತ ನಡೆಸುತ್ತಿದೆ.ಇತರೆ ದೇಶದಂತೆ ಚುನಾವಣೆಯಲ್ಲಿ ಸೋತರು ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ಘಟನೆಗಳು ಭಾರತದಲ್ಲಿ ನಡೆದಿಲ್ಲ.
ಅಧಿಕಾರ ಹಸ್ತಾಂತರದ ವೇಳೆ ದಾಳಿಗಳು ನಡೆದಿಲ್ಲ. ಸ್ವಾತಂತ್ರ್ಯ ನಂತರ ಹೇಗೆ ಆಡಳಿತ ನಡಸಬೇಕೆಂಬ ವಿಧಾನ ಭಾರತೀಯರಿಗೆ ಗೊತ್ತಿಲ್ಲ ಎಂದು ಪರಕೀಯರು ನಮ್ಮನ್ನು ಹಿಯ್ಯಾಳಿಸಿದ್ದರು.ಆದರೆ ಭಾರತ ಇಂದು ಸಂವಿಧಾನದ ಅಡಿಯಲ್ಲಿ ಇತರೆ ರಾಷ್ಟ್ರಗಳಿಗೆ ಮಾದರಿಯಾಗುವಂತೆ ಆಡಳಿತ ನಡೆಸುತ್ತಿದೆ.ಇಡೀ ವಿಶ್ವ ಭಾರತವನ್ನು ಗೌರವಿಸುತ್ತಿದೆ,ಭಾರತೀಯರಿಗೆ ಮನ್ನಣೆ ಲಭಿಸಿದೆ,ಭಾರತ ಎಂದಿಗೂ ಸೋಲುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ., ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಷನ್ ಆಂಡ್ ರಿಸರ್ಚ್ ಕುಲಪತಿ ಡಾ.ಆರ್.ವೆಂಕಟ ರಾವ್,ಡೀನರು ಡಾ.ವಿ.ಸುದೇಶ್,ವಿಭಾಗ ಮುಖ್ಯಸ್ಥರಾದ ಪ್ರೊ .ಡಾ.ಸತೀಶ್ ಗೌಡ ಎನ್,ಪ್ರಾಂಶುಪಾಲರು ಡಾ.ಎನ್.ದಶರಥ್,ಪಿಎಂ – ಉಷಾ ನೋಡಲ್ ಆಫೀಸರ್ ಪ್ರೊ.ಹನುಮಂತಪ್ಪ ಎಂ ಪಾಲ್ಗೊಂಡಿದ್ದರು.