ಸತ್ಯಸಾಯಿ ಗ್ರಾಮ: ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ಶಿಕ್ಷಣ ಪ್ರಮಾಣ ಶೇಕಡ ಹನ್ನೆರಡು ಆಗಿತ್ತು. 75 ವರ್ಷಗಳನಂತರ ದೇಶವು ಶೇಕಡಾ ಎಂಬತ್ತರಷ್ಟು ಶಿಕ್ಷಣ ಪ್ರಮಾಣ
ವನ್ನು ಹೊಂದಿರುವುದನ್ನು ಕಾಣಬಹುದು. ಭಾರತ ಒಕ್ಕೂಟವುರಚನೆಯಾದ ನಂತರ ತನ್ನ ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ ಮತ್ತು ಆಹಾರಕ್ಕೆ ಪ್ರಾಧಾನ್ಯತೆ ನೀಡಿತು. ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ದೂರ ದೃಷ್ಟಿಯ ನಿಯಮವು ಇಂದು ನಮ್ಮನ್ನುಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದೆ. ವರ್ತ
ಮಾನದ ಭಾರತವು ಶಿಕ್ಷಣ ಮತ್ತು ಆಹಾರ ಉತ್ಪಾದನೆಯಲ್ಲಿಮುಂಚೂಣಿಯಲ್ಲಿದೆ.
ಬಡ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಳಚಿ ಅಭಿವೃದ್ಧಿ ಶೀಲ ದೇಶವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದಕ್ಕೆ ಕಾರಣ ನಮ್ಮಲ್ಲಾದ ಶಿಕ್ಷಣ ಮತ್ತು ಆಹಾರ ಕ್ರಾಂತಿ. ಆಹಾರಕ್ಕಾಗಿ ಪರ ರಾಷ್ಟ್ರಗಳನ್ನು ಅವಲಂಬಿಸಿದ್ದ ಭಾರತವು ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಭಾರತವು ಜಗತ್ತಿನಲ್ಲಿಯೇ ಅತಿ ದೊಡ್ಡಮಾನವ ಶಕ್ತಿ ಸಂಪನ್ನ ರಾಷ್ಟ್ರವಾಗಿದೆ. ಇದಕ್ಕೆಲ್ಲ ಕಾರಣಶಿಕ್ಷಣ. ಆದುದರಿಂದ ಎಲ್ಲಾ ವಿಕಾಸಗಳ ಅಡಿಪಾಯ ಶಿಕ್ಷಣವಾಗಿದೆ. ಪುರಾತನ ಕಾಲದಿಂದಲೂ ಭಾರತ ವಿವೇಕದ ತವರೂರು.
ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಗೆ ಉತ್ತೇಜನ ನೀಡುತ್ತಾ, ಸಮಾಜಕ್ಕೆ ಸಂಸ್ಕಾರವಂತ ಪ್ರಜೆಗಳನ್ನು ರೂಪಿಸಿಕೊಡುವ ಶಿಕ್ಷಣ ಸಂಸ್ಥೆ ಇದ್ದರೆ ಅದು ಶ್ರೀ ಸತ್ಯಸಾಯಿ ಸಂಸ್ಥೆಯಲ್ಲದೆ ಇನ್ನೊಂದು ಇರಲು ಸಾಧ್ಯವಿಲ್ಲ. ಈ ಸಂಸ್ಥೆಯು ಪ್ರಪಂಚಕ್ಕೆ ಮಾದರಿಯಾಗಿದೆ. ಇಂತಹ ಆದರ್ಶ ಸಂಸ್ಥೆಯ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಒಂದು ಸೌಭಾಗ್ಯ, ಎಂದು ಡಾ ಜಿ ಪರಮೇಶ್ವರ್ ಅವರು ತಿಳಿಸಿದರು.
ಅವರು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಭವನದಲ್ಲಿ ಆಯೋಜನೆಗೊಂಡ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ದಿಕ್ಸೂಚಿ ನುಡಿ ಮತ್ತು ಪ್ರಾಸ್ತಾವಿಕ ಉಪನ್ಯಾಸವನ್ನು ಗೈದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಬಿ ಎನ್ ನರಸಿಂಹಮೂರ್ತಿ ಅವರು ಮಾತನಾಡಿ ಸಂಸ್ಥೆಯ ಧ್ಯೇಯ ಧೋರಣೆಗಳನ್ನು ವಿವರಿಸಿ, ಆಗಮಿಸಿದ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾತನಾಡಿ, ಪ್ರಜೆಗಳು ಶಕ್ತಿ ಶಾಲಿಗಳಾಗಿದ್ದರೆ ದೇಶವು ಪ್ರಬಲವಾಗಿರುತ್ತದೆ. ಶಿಕ್ಷಣವು ಎಲ್ಲಾ ರೀತಿಯಲ್ಲೂ ಪ್ರತಿಯೊಬ್ಬರನ್ನು ಸಬಲರನ್ನಾಗಿ ಮಾಡುತ್ತದೆ. ಶಿಕ್ಷಣವೆಂದರೆ ಕೇವಲ ಓದು ಬರಹ ಅಲ್ಲ. ಸಂಸ್ಕಾರದಿಂದ ಮಿಳಿತವಾದ ಭಾವನಾತ್ಮಕ ಸಮತೋಲನವನ್ನು ಸಾಧಿಸುವ ಮೂಲ ಮಂತ್ರ. ಶಾಸ್ತ್ರ, ಶಸ್ತ್ರ, ಗುಣ ಸಂಪನ್ನತೆ ಮತ್ತು ಪರೋಪಕಾರ ಧೋರಣೆ ಶಿಕ್ಷಣದ ಗುರಿಯಾಗಬೇಕು. ಇದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ತಮ್ಮ ಸಂಸ್ಥೆಯು ಮಾಡುತ್ತಿದೆ. ಯಾರೂ ಕೂಡ ಯಾವುದೇ ವಿಚಾರದಲ್ಲಿ ಹಿಂಜರಿಯಬಾರದು. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂಜರಿದವರು ಗೆಲ್ಲಲಾರರು, ಗೆದ್ದವರು ಹಿಂದಕ್ಕೆ ಸರಿಯಬಾರದು. ಸಮಾಜದಿಂದ ಪಡೆದ ಶಿಕ್ಷಣವನ್ನು ಸಮಾಜದ ಹಿತಕ್ಕಾಗಿ ಬಳಸಬೇಕು. ಸಮಾಜ, ಸಂಘ ಮತ್ತು ಸರಕಾರ ಒಗ್ಗಟ್ಟಿನಿಂದ ಶ್ರಮಿಸಿದರೆ ಅಭ್ಯುದಯವನ್ನು ಸಾಧಿಸಲು, ಸಾಧ್ಯ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಸಮಗ್ರ ಪಂಗಡ ಪ್ರಶಸ್ತಿ, ಸಹಭಾಗಿ ಪುರಸ್ಕಾರ ಮತ್ತು ಪಂಗಡ ಪ್ರಶಸ್ತಿಗಳು ವಿತರಣೆಯಾದವು. ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಡಾ ಸಿ ಶ್ರೀನಿವಾಸ್, ಕ್ರಿಕೆಟ್ ದಂತಕತೆ ಜಿ ಆರ್ ವಿಶ್ವನಾಥ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.ತುಂಬಿದ ಸಭಾಂಗಣದಲ್ಲಿ ಇತರೆ ಆಮಂತ್ರಿತ ಗಣ್ಯರು, ಪೋಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ಶಿಕ್ಷಕಿಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.