ವಾಷಿಂಗ್ಟನ್: ಶ್ವೇತಭವನದ ಮತ್ತೊಂದು ಪ್ರಮುಖ ಹುದ್ದೆಗೆ ಅನಿವಾಸಿ ಭಾರತೀಯನನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಭಾರತೀಯ ಅಮೆರಿಕನ್ ಉದ್ಯಮಿ ಮತ್ತು ಲೇಖಕ ಶ್ರೀರಾಮ ಕೃಷ್ಣನ್ ಅವರನ್ನು ಕೃತಕ ಬುದ್ಧಿಮತ್ತೆಯ ಶ್ವೇತಭವನದ ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ್ದಾರೆ.
ಶ್ರೀರಾಮ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆ ನೀತಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ!, ಫೇಸ್ಬುಕ್ ಮತ್ತು ಸ್ನ್ಯಾಪ್ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿರುವ ಕೃಷ್ಣನ್, ವೈಟ್ ಹೌಸ್ AI ಮತ್ತು ಕ್ರಿಪ್ಟೋ ಝಾರ್ ಆಗಿರುವ ಡೇವಿಡ್ ಓ ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಸಲಹೆಗಾರರ ಅಧ್ಯಕ್ಷರ ಮಂಡಳಿಯೊಂದಿಗೆ ಕೆಲಸ ಸೇರಿದಂತೆ ಸರ್ಕಾರದಾದ್ಯಂತ AI ನೀತಿಯನ್ನು ರೂಪಿಸಲು ಮತ್ತು ಸಂಘಟಿಸಲು ನೆರವಾಗಲಿದ್ದಾರೆ. ಶ್ರೀರಾಮ್ ವಿಂಡೋಸ್ ಅಜುರೆ ಸ್ಥಾಪಕ ಸದಸ್ಯರಾಗಿ ಮೈಕ್ರೋಸಾಫ್ಟ್ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು ಎಂದು ಟ್ರಂಪ್ ತಿಳಿಸಿದ್ದಾರೆ.
ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು AI ಯಲ್ಲಿ ಅಮೆರಿಕ ನಾಯಕತ್ವ ಖಾತ್ರಿ ಮುಂದುವರಿಕೆಗೆ ಡೇವಿಡ್ ಸ್ಯಾಕ್ಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನನಗೆ ಗೌರವವಿದೆ ಎಂದು ಕೃಷ್ಣನ್ ಹೇಳಿದ್ದಾರೆ. ಅವರ ನೇಮಕವನ್ನು ಭಾರತೀಯ ಅಮೆರಿಕನ್ ಸಮುದಾಯ ಸ್ವಾಗತಿಸಿದೆ.