ಪಾಂಡವಪುರ : ಸಂಘದ ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡ ಹೇಳಿದರು.ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಘವನ್ನು ಕೆಂಪೇಗೌಡರ ಹೆಸರಿಗೆ ಸೀಮಿತಗೊಳಿಸದೆ ಹತ್ತು-ಹಲವು ಕಾರ್ಯಕ್ರಮಗಳ ಮೂಲಕ ಸಂಘದ ಉನ್ನತ್ತಿಗೆ ಶ್ರಮಿಸಲಾಗುವುದು ಎಂದರು.
ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕೆಂಪೇಗೌಡ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಸಂಘದ ಮೂಲಕ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಸರಳ ವಿವಾಹಕ್ಕೆ ಪ್ರೋತ್ಸಾಹಿಸುವುದಾಗಿ ಅವರು ತಿಳಿಸಿದರು.ಸಂಘದ ಮಾರ್ಗದರ್ಶಕರಾದ ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಮಾತನಾಡಿ, ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಯಾವುದೇ ಸಂಘಟನೆ ಮಾಡಬೇಕಾದರೆ ಪರಿಶ್ರಮ ಅತಿ ಮುಖ್ಯವಾಗಿ ಬೇಕು ಎಂದರು.
ಪಾಂಡವಪುರದಲ್ಲಿ ನೂರಾರು ಸಂಘಗಳಿವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಸಂಘಗಳು ಉಸಿರಾಡುತ್ತಿವೆ. ಅದರಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಸಂಘವು ಕೂಡ ಪ್ರಮುಖವಾಗಿ ಉಸಿರಾಡಬೇಕು. ಸಂಘ ಬೆಳೆದರೆ ಮಾತ್ರ ಹಲವರಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ. ಜತೆಗೆ ನಮ್ಮಲ್ಲೂ ಕೂಡ ಬಹಳಷ್ಟು ದಾನಿಗಳಿದ್ದಾರೆ. ಅವರನ್ನು ಬೆನ್ನತ್ತಿ ಸಂಪರ್ಕಿಸಿದರೆ ಅವರಿಂದಲೂ ಹೆಚ್ಚಿನ ಸಹಕಾರ ಪಡೆಯಬಹುದು ಎಂದರು.
ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಯಮುನಾಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಸಹಕಾರಸಂಘ ಸ್ಥಾಪನೆಗೆ ಪಾಂಡವಪುರ ಸದಸ್ಯರೊಂದಿಗೆ ಚರ್ಚಿಸಲಾಗಿತ್ತು. ಎಲ್ಲರ ನಿರಂತರ ಶ್ರಮದಿಂದಾಗಿ ಪಾಂಡವಪುರದಲ್ಲಿ ಪ್ರಪ್ರಥಮ ಕೆಂಪೇಗೌಡರ ಪತ್ತಿನಸಹಕಾರ ಸಂಘದ ಸ್ಥಾಪನೆಗೆ ನಾಂದಿಹಾಡಲಾಯಿತು ಎಂದರು. ಮುಂದಿನ ದಿನಗಳಲ್ಲಿ ಮಹಿಳಾ ಸಹಕಾರ
ಸಂಘವನ್ನೂ ರಚಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕೆಂಪೇಗೌಡರ ಪತ್ತಿನ ಸಹಕಾರ ಸಂಘವು ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.ಈ ವೇಳೆ ಸಂಘದ ನೂತನ ಉಪಾಧ್ಯಕ್ಷ ನೀಲನಹಳ್ಳಿ ಬಾಜೇಗೌಡ, ನಿರ್ದೇಶಕರಾದ ಶಂಕನಹಳ್ಳಿ ಕುಮಾರ್, ಡಾಮಡಹಳ್ಳಿ ಸೌಭಾಗ್ಯ, ಪಾಂಡವಪುರ ಬಿ.ಕೆ.ರೂಪಾ, ಚಿನಕುರಳಿ ನರಸಿಂಹೇಗೌಡ, ತಾಳಶಾಸನ ವೀರಭದ್ರಸ್ವಾಮಿ, ಕೆನ್ನಾಳು ಮಹೇಶ್, ಅರಳಕುಪ್ಪೆ ಇಂದಿರೇಶ್, ಕನಗನಮರಡಿ ಎ.ನಾಗರಾಜು, ಕೋಡಾಲ ಕೆ.ಎಚ್.ರಾಜೇಗೌಡ, ಶ್ಯಾದನಹಳ್ಳಿ ವಿಶ್ವೇಶ್ವರ ಇತರರಿದ್ದರು.