ಡರ್ಬನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಸಂಜು ಸ್ಯಾಮ್ಸನ್ ಭರ್ಜರಿ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿದೆ.
ಡರ್ಬನ್ ನ ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಸಂಜು ಸ್ಯಾಮ್ಸನ್ (107 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ 202 ರನ್ ಕಲೆಹಾಕಿತು.
ಇನ್ನಿಂಗ್ಸ್ ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ತಂಡದ ಮೊತ್ತ 24 ರನ್ ಗಳಾಗಿದ್ದಾಗ ಕೇವಲ 7 ರನ್ ಗಳಿಸಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೊಯಿಟ್ಜಿ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಸೂರ್ಯ ಕುಮಾರ್ ಯಾದವ್ ಜೊತೆಗೂಡಿದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 107 ರನ್ ಕಲೆ ಹಾಕಿದರು.
ಸಂಜುಗೆ ಉತ್ತಮ ಸಾಥ್ ನೀಡಿದ ನಾಯಕ ಸೂರ್ಯ ಕುಮಾರ್ ಯಾದವ್ 27 ರನ್ ಗಳಿಸಿದರೆ, ತಿಲಕ್ ವರ್ಮಾ 33 ರನ್ ಗಳಿಸಿ ಕೇಶವ್ ಮಹಾರಾಜ್ ಬೌಲಿಂಗ್ ನಲ್ಲಿ ಔಟಾದರು. ಈ ಹಂತದಲ್ಲಿ 107 ರನ್ ಗಳಿಸಿದ್ದ ಸಂಜು ಕೂಡ ಪೀಟರ್ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಬಂದ ಹಾರ್ದಿಕ್ ಪಾಂಡ್ಯ 2 ರನ್ ಮತ್ತು ರಿಂಕು ಸಿಂಗ್ 11 ಗಳಿಸಿ ಕೊಯಿಟ್ಜಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಅಕ್ಸರ್ ಪಟೇಲ್ ಶೂನ್ಯ 7 ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿದ್ದು, ದಕ್ಷಿಣ ಆಫ್ರಿಕಾಗೆ ಗೆಲ್ಲಲು 203 ರನ್ ಗಳ ಬೃಹತ್ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾ ಪರ ಕೋಯಿಟ್ಜಿ 3 ವಿಕೆಟ್ ಕಬಳಿಸಿದರೆ, ಮಾರ್ಕಾ ಜೇನ್ಸನ್, ಕೇಶವ್ ಮಹಾರಾಜ್, ಎನ್ ಪೀಟರ್ ಮತ್ತು ಕ್ರುಗರ್ ತಲಾ ಒಂದು ವಿಕೆಟ್ ಪಡೆದರು.