ದೆಹಲಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಜಯ ಸಾಧಿಸಿದ ಭಾರತ ತಂಡ ಆಟಗಾರರಿಗೆ ಇಂದು ಸಂಜೆ ಸನ್ಮಾನ ಮಾಡಿ ಗೌರವಿಸಲಾಗುವುದು.
ಮುಂಬೈನ ವಾಂಖೇಡ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಬಿಸಿಸಿಐನಿಂದ ಹಮ್ಮಿಕೊಳ್ಳಲಾಗಿದೆ. ದೆಹಲಿಯಿಂದ ಸಂಜೆ ಮುಂಬೈಗೆ ಆಗಮಿಸುವ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವಾಂಖೇಡ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುವುದು.
ಮುಂಬೈನ ನಾರೀಮನ್ ಪಾಯಿಂಟ್ನಿಂದ ವಾಂಖೇಡ ಕ್ರೀಡಾಂಗಣವರೆಗೂ ಸುಮಾರು 2.8 ಕಿ.ಮೀ ವಿಜಯೋತ್ಸವ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕ್ರಿಕೆಟ್ ಆಟಗಾರರು ಮತ್ತು ಸಿಬ್ಬಂದಿಗೆ ಬಿಸಿಸಿಐ ವತಿಯಿಂದ 125 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಇಂದು ವಿಶ್ವಕಪ್ನೊಂದಿಗೆ ಭಾರತ ಕ್ರಿಕೆಟ್ ತಂಡ ಬಾರ್ಬಡೋಸ್ನಿಂದ ದೆಹಲಿಗೆ ಆಗಮಿಸಿತು. ಆಟಗಾರರನ್ನು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿ ಸಹಸ್ರಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಜಯಘೋಷದೊಂದಿಗೆ ಸ್ವಾಗತಿಸಿದರು. ದೆಹಲಿ ವಿಮಾನ ನಿಲ್ದಾಣದಿಂದ ಐಟಿಸಿ ಮೌರ್ಯ ಹೋಟೆಲ್ಗೆ ತೆರಳಿದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ಅವರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ವಿಶ್ವ ಕಪ್ ಗೆದ್ದ ಖುಷಿಗೆ ಭಾರತ ತಂಡದ ಜತೆಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.ನಂತರ ಭಾರತ ತಂಡವು 12.00ಗಂಟೆಗೆ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಮೋದಿ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು.
ಈ ಸಂಭ್ರಮದಲ್ಲಿ ವಿರಾಟ್, ರೋಹಿತ್, ಹಾರ್ದಿಕ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾಗವಹಿಸಿದ್ದರು. ಕೋಚ್ ರಾಹುಲ್ ದ್ರಾವಿಡ್ ಕೇಕ್ ಕಟ್ ಮಾಡುವ ಮೂಲಕ ಇಂಡಿಯಾ ತಂಡದ ಸಂಭ್ರಮವನ್ನು ಹೆಚ್ಚಿಸಿದರು.ಭಾರತ ಶನಿವಾರದಂದು ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿ, ವಿಜಯವನ್ನು ಸಾಧಿಸಿತ್ತು.