ಮುಂಬೈ: ನಿನ್ನೆ ರಾತ್ರಿ ನಿಧನರಾದ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಅನಾರೋಗ್ಯ ಹಿನ್ನೆಲೆ ಮುಂಬೈನ ಬ್ರೀಚ್ ಕಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಈ ಹಿನ್ನೆಲೆ ಅನೇಕ ಗಣ್ಯರು, ರಾಜಕಾರಣಿಗಳು ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ರತನ್ ಟಾಟಾ ಅವರ ನಿಧನದ ಕುರಿತು ಏಕನಾಥ್ ಶಿಂಧೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಟಾಟಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ಮಹಾರಾಷ್ಟ್ರದಲ್ಲಿ ಶೋಕಾಚರಣೆ ಮಾಡಲಾಗುತ್ತದೆ.
ಗೌರವ ಸೂಚಕವಾಗಿ ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಇಂದು ನಿಗದಿಯಾಗಿದ್ದ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಟಾಟಾ ಅವರ ಪಾರ್ಥಿವ ಶರೀರವನ್ನು ಮುಂಬೈನ ನಾರಿಮನ್ ಪಾಯಿಂಟ್ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆಟ್ರ್ಸ್ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಇರಿಸಲಾಗುವುದು. ಅಲ್ಲಿ ಜನರು ಅಂತಿಮ ನಮನ ಸಲ್ಲಿಸಬಹುದು. ಬಳಿಕ ವರ್ಲಿ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರತನ್ ಟಾಟಾ ಅವರು ಭವಿಷ್ಯದ ಪೀಳಿಗೆಯ ಉದ್ಯಮಿಗಳಿಗೆ ಮಾದರಿಯಾಗಿದ್ದರು ಮತ್ತು ಭಾರತದ ಕೈಗಾರಿಕಾ ಬೆಳವಣಿಗೆಯ ಸಂಕೇತ. 2008ರ ಮುಂಬೈ ದಾಳಿಯ ನಂತರ ಅವರು ತೋರಿದ ದೃಢತೆಯನ್ನು ಪ್ರತಿಯೊಬ್ಬರೂ ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಅವರ ದೃಢ ನಿರ್ಧಾರಗಳು, ಧೈರ್ಯದ ಮನೋಭಾವ ಮತ್ತು ಸಾಮಾಜಿಕ ಬದ್ಧತೆ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಕೇಂದ್ರ ಸಚಿವರು, ಸಂಸದರರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.