ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಸಾಲ ಪಡೆದವರು ಆತ್ಮಹತ್ಯೆ ದಾರಿಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವ ಸರ್ಕಾರ ಈ ಸಂಬಂಧ ಗೃಹ ಹಾಗೂ ಕಾನೂನು ಇಲಾಖೆಯಿಂದ ಸಿದ್ದಪಡಿಸಿರುವ ಕರಡು ಮಸೂದೆ ಬಗ್ಗೆ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.
ವಿ.ಎಸ್. ಉಗ್ರಪ್ಪ ರವರ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರ ಸಮಿತಿಯು ನೀಡಿರುವ ಅಂತಿಮ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಸೇರಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್ಟೇಬಲ್ ಸಬ್-ಇನ್ಸ್ಪೆಕ್ಟರ್ | ಹಾಗೂ ಪೊಲೀಸ್ ಉಪಾಧೀಕ್ಷಕರುಗಳ ಹುದ್ದೆಗಳಿಗೆಪ್ರಶಂಸನೀಯ ಕ್ರೀಡಾಪಟುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2025”ಕ್ಕೆ ಅನುಮೋದನೆ ನೀಡುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಬಾಗಶಃ ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.