ಲಖನೌ: ಸಂಭಾಲ್ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟದ ಪರಿಹಾರವನ್ನು ಪ್ರತಿಭಟನಾಕಾರರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರತಿಭಟನಾಕಾರರ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಯುತ್ತಿದ್ದ ವೇಳೆ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದರು.
ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಯುಪಿ ಸರ್ಕಾರ ಕಠಿಣ ನಿಲುವು ತಳೆದಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಪೋಸ್ಟರ್ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಗಲಭೆಕೋರರನ್ನು ಬಂಧಿಸಲು ಸಹಾಯಕವಾಗುವಂಥ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಸಹ ಘೋಷಿಸಬಹುದು” ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆಯಲ್ಲಿಯೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟುಮಾಡುವವರ ವಿರುದ್ಧವೂ ಯೋಗಿ ಸರ್ಕಾರ ಇದೇ ರೀತಿಯ ಕ್ರಮ ಕೈಗೊಂಡಿತ್ತು. ರಾಜ್ಯ ರಾಜಧಾನಿ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಫೋಸ್ಟರ್ ಹಾಕಲಾಗಿತ್ತು. ಆದರೆ, ಕೋರ್ಟ್ ಆದೇಶದ ನಂತರ ಅವುಗಳನ್ನು ತೆರವುಗೊಳಿಸಲಾಯಿತು.