ರಾಮನಗರ: ಭಾರತದ ಸಂವಿಧಾನದ ಪ್ರತಿಯನ್ನು ನಿರ್ಲಕ್ಷ್ಯದಿಂದ ಎಸೆದು ಸಂವಿಧಾನಕ್ಕೆ ಅಪಚಾರ , ಅಗೌರವ ಸಲ್ಲಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅಪಮಾನಗಳ ತಡೆ ಕಾಯ್ದೆ 1971ರ ಅನ್ವಯ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ರಾಮನಗರ ಪುರಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?: ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನೆಗಳಿಗೆ ಹೇರಿರುವ ನಿಷೇಧಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ರೈತಸಂಘ, ದಲಿತ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಿಲ್ಲಾ ಉನ್ನತ ಪೊಲೀಸ್ ಅಧಿಕಾರಿಗಳ ಮುಖೇನ ಜಿಲ್ಲಾಧಿಕಾರಿಗಳು ಹೋರಾಟಗಾರರನ್ನು ಮಾತುಕತೆಗಾಗಿ ತಮ್ಮ ಕಚೇರಿಗೆ ಆಹ್ವಾನಿಸಿದರು. ಅದರಂತೆ ಮಧ್ಯಾಹ್ನ 3 ರಿಂದ 3.15ರ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ನಾನು ಹಾಗೂ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ರಮ್ಯಾ ರಾಮಣ್ಣ, ವಿಭಾಗೀಯ ಅಧ್ಯಕ್ಷ ಕೆ.ಮಲ್ಲಯ್ಯ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ , ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿರವರ ಜೊತೆ ತೆರಳಿದ್ದೇವು.
ನಮ್ಮೊಂದಿಗೆ ಮಾತನಾಡುತ್ತಿದ್ದ ವೇಳೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ರವರು ಸಂವಿಧಾನದ ಪ್ರತಿಯನ್ನು ದರ್ಪದಿಂದ ತಮ್ಮ ಟೇಬಲಿನ ಅಂಚಿನವರೆಗೆ ಎಸೆದು ಓದಿದ್ದೀರಾ ಎಂದು ಕೇಳಿದರು. ಸಂವಿಧಾನದ ಪ್ರತಿಯನ್ನು ಗೌರವಿಸದೆ ಎಸೆದಿರುವುದು ಸಂವಿಧಾನಕ್ಕೆ ಎಸಗಿರುವ ಅಗೌರವವಾಗಿದೆ. ಯಾವುದೇ ಮಾತಿನ ಮೂಲಕ , ಬರಹಗಳ ಮೂಲಕ ಹಾಗೂ ಚಟುವಟಿಕೆಗಳ ಮೂಲಕ ಅಗೌರವ ಸೂಚಿಸಿದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಬೇಕು. ಆ ಮೂಲಕ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಶಾಂತ್ ಹೊಸದುರ್ಗ ದೂರು ನೀಡಿದ್ದಾರೆ.
ದೂರನ್ನು ಸ್ವೀಕರಿಸಿದ್ದು, ಅದನ್ನು ಪರಿಶೀಲನೆ ನಡೆಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದಾಗಿ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣರವರು ಇಂದು ಸಂಜೆ ಪತ್ರಿಕೆಕ್ಕೆ ಪ್ರತಿಕ್ರಿಯೆ ನೀಡಿದಾರೆ.