ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಒಕ್ಕೂಟ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಸಂಪೂರ್ಣ ಅನ್ಯಾಯವಾಗಿರುವುದರ ವಿರುದ್ಧ ಸಂಸತ್ನಲ್ಲಿ ರಾಜ್ಯದ ಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ರಾಜ್ಯದ ೧೯ ಎನ್ಡಿಎ ಸಂಸದರು ಹಾಗೂ ಐವರು ರಾಜ್ಯಸಭಾ ಸದಸ್ಯರಿಗೆ ಪತ್ರವನ್ನು ಬರೆದಿರುವ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದಕ್ಕೆ ಇಲ್ಲಿನ ಸಂಸದರ ಮೌನವೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
“ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದು ನಿಮ್ಮ ಗಮನಕ್ಕೂ ಬಂದಿದೆ ಎಂಬ ವಿಶ್ವಾಸ ಹೊಂದಿದ್ದೇವೆ. ರಾಜ್ಯ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಲು ಈ ಬಾರಿಯ ಬಜೆಟ್ನಲ್ಲಿ ಮಾನ್ಯತೆ ನೀಡಬಹುದು ಎಂದು ಭಾವಿಸಿದ್ದೆವು. ಮೇಕೆದಾಟು ಸಮಾನಾಂತರ ಅಣೆಕಟ್ಟು, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ, ಏಮ್ಸ್ ಸ್ಥಾಪನೆ, ಪೆರಿಫೆರಲ್ ರಿಂಗ್ ರೋಡ್, ಸಬ್ ಅರ್ಬನ್ ರೈಲ್ವೆ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳಿಗೆ ಅನುದಾನವನ್ನು ನಿರೀಕ್ಷಿಸಿದ್ದೆವು.
ಆದರೆ ಈ ಬಾರಿಯು ಕರ್ನಾಟಕವನ್ನು ಕಡೆಗಣಿಸಿರುವುದು ಬೇಸರ ಮೂಡಿಸಿದೆ. ಒಟ್ಟು ೧೯ ಸಂಸದರನ್ನು ಕೊಟ್ಟಿದ್ದರೂ ಕನ್ನಡಿಗರನ್ನು ಕೈಬಿಡಲಾಗಿದೆ. ಕಳೆದ ಬಾರಿ ೨೫ ಸಂಸದರನ್ನು ಕೊಟ್ಟಿದ್ದಾಗಲೂ ಇದೇ ರೀತಿ ಕಡೆಗಣಿಸಲಾಗಿತ್ತು. ಪ್ರತಿಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಚೊಂಬನ್ನು ಹೊರತುಪಡಿಸಿ ಬೇರೇನು ಸಿಗುತ್ತಿಲ್ಲ” ಎಂದು ಮುಖ್ಯಮಂತ್ರಿ ಚಂದ್ರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಯಾವೊಬ್ಬ ಬಿಜೆಪಿ ಸಂಸದರೂ ಪಾರ್ಲಿಮೆಂಟ್ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಉದಾಹರಣೆ ಇದುವರೆಗೆ ಸಿಕ್ಕಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದಕ್ಕೆ ಇಲ್ಲಿನ ಸಂಸದರ ಮೌನವೇ ಪ್ರಮುಖ ಕಾರಣವಾಗಿದೆ. ಕನ್ನಡಿಗರ ಪರವಾಗಿ ಧ್ವನಿಯೆತ್ತಲು ಅಶಕ್ತರಾಗಿದ್ದರೆ ಕನ್ನಡಿಗರನ್ನು ಏಕೆ ಪ್ರತಿನಿಧಿಸುತ್ತಿದ್ದೀರಿ? ನಿಮ್ಮನ್ನು ಸಂಸತ್ತಿಗೆ ಕನ್ನಡಿಗರು ಏಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂಬುದನ್ನು ಮನಗಂಡು ಚರ್ಚೆಯಲ್ಲಿ ಭಾಗವಿಸಬೇಕು. ಇನ್ನೂ ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ.
ಸಂಸತ್ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನೀವು ನಿಷ್ಕ್ರಿಯರಾಗದೆ ಕನ್ನಡಿಗರ ಪರ ಧ್ವನಿಯೆತ್ತಬೇಕು. ಕನ್ನಡಿಗರ ಹಿತಕಾಯುವ ದೃಷ್ಟಿಯಲ್ಲಿ ಸದಾ ಎಚ್ಚರದ ಸ್ಥಿತಿಯಲ್ಲಿರಬೇಕು. ಕರ್ನಾಟಕದ ಪರ ಧ್ವನಿಗೆ ಪಕ್ಷಾತೀತವಾಗಿ ನಾವು ಬೆಂಬಲ ನೀಡುತ್ತೇವೆ” ಎಂದು ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದ್ದಾರೆ.