ಉತ್ತರ ಪ್ರದೇಶ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ವಿವಾಹವಾಗಲಿದ್ದಾರೆ.
ಕೆರಕಟ್ನ ಎಸ್ಪಿ ಶಾಸಕ ತುಫಾನಿ ಸರೋಜ್ ತಮ್ಮ ಮಗಳು ರಿಂಕು ಅವರನ್ನು ವರಿಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ಮದುವೆ ಮಾತುಕತೆ ನಡೆದಿದೆ. ಆದರೆ ಎಂಗೇಜ್ಮೆಂಟ್ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ರಿಂಕು ಸಿಂಗ್ ಅವರ ಕುಟುಂಬವನ್ನು ಜ.16ರಂದು ಅಲಿಘಡದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ನಿಶ್ಚಿತಾರ್ಯ ಹಾಗೂ ಮದುವೆ ಕಾರ್ಯಕ್ರಮಗಳ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ. ಕಳೆದ ಒಂದು ವರ್ಷದಿಂದ ರಿಂಕು ಸಿಂಗ್ ಹಾಗೂ ಮಗಳು (ಪ್ರಿಯಾ ಸರೋಜ್) ಪರಸ್ಪರ ಪರಿಚಿತರಾಗಿ, ಇಷ್ಟಪಟ್ಟಿದ್ದರು. ಇದೀಗ ವಿವಾಹಕ್ಕೆ ಎರಡೂ ಕುಟುಂಬಗಳು ಒಪ್ಪಿವೆ’ ಎಂದು ಪ್ರಿಯಾ ಸರೋಜ್ ತಂದೆ ಶಾಸಕ ತುಫಾನಿ ಸರೋಜ್ ತಿಳಿಸಿದ್ದಾರೆ.