ಮೈಸೂರು: ತಮ್ಮನ್ನು ಅವಹೇಳನಕಾರಿಯಾಗಿ ಸಂಭೋದಿಸಿ ಮಾತನಾಡಿರುವ ಸಚಿವ ಜಮೀರ್ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರ್ಪಡಿಕೆ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ಚಾಮುಂಡಿಬೆಟ್ಟದಲ್ಲಿAದು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅವರ ಮಾತನಾಡಿರುವುದು ದುಡ್ಡಿನ ಮದದಿಂದ ಎಂದು ಹೇಳಿದ್ದಾರೆ.
ಅವರಿಗೂ ನನಗೂ ರಾಜಕೀಯವಾಗಿ ಸ್ನೇಹವಿತ್ತೇ ಹೊರತು ಬೇರೆ ಯಾವುದೇ ರೀತಿಯ ಸಲುಗೆ ಇರಲಿಲ್ಲ ಎಂದು ಸ್ಪಷ್ಪಪಡಿಸಿರುವ ಕುಮಾರಸ್ವಾಮಿ ಈ ಹಿಂದೆ ಈಗಿನ ವಿಧಾನಪರಿಷತ್ ಸ್ಪೀಕರ್ ಆಗಿರುವ ಬಸವರಾಜ್ ಹೊರಟ್ಟಿ ಅವರು ನನ್ನನ್ನು ಕುಮಾರ ಎಂದು ಸಂಬೋಧಿಸಿದ್ದಕ್ಕೆ ಅವರನ್ನು ಹೊಡೆಯಲು ಹೋಗಿದ್ದ ಆಸಾಮಿ ಈತ ಎಂದ ಅವರು, ಇದು ಅವರ ಸಂಸ್ಕೃತಿ ಎಂದರು.
ಜಮೀರ್ ಹೇಳಿಕೆಯನ್ನು ಸಮರ್ಥಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗೃಹಸಚಿವರು ಮಾತನಾಡಿದ್ದಾರೆ. ಬೇರೆ ಯಾರೇ ಸಾಮಾನ್ಯ ಮನುಷ್ಯ ಜಮೀರ್ ಮಾದರಿಯಲ್ಲಿ ಮಾತನಾಡಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಇವರಿಗೇನಾದರೂ ಸಭ್ಯತೆ ಇದೆಯೇ ಎಂದು ಕುಮಾರಸ್ವಾಮಿ ಕೆಂಡಾಮAಡಲರಾದರು.
ದೇವೇಗೌಡರು ಸೊಕ್ಕು ಮುರಿಯುತ್ತೇನೆ, ಗರ್ವಭಂಗ ಅಂದಿದ್ದು, ಅಸಂವಿಧಾನಿಕ ಪದವೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಯವರು ಬಿಜೆಪಿಯಿಂದ ತಮ್ಮ ಪಕ್ಷದ ಶಾಸಕರನ್ನು ಖರೀದಿ ಮಾಡಲು ೫೦ ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ ರಚಿಸುತ್ತಿರುವ ಅವರು, ಇದಕ್ಕೂ ಒಂದು ತನಿಖೆಗಾಗಿ ಎಸ್ಐಟಿ ರಚನೆ ಮಾಡಲಿ ಎಂದು ಲೇವಡಿ ಮಾಡಿದರು.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲುತ್ತಾರಾ ಎಂಬ ಪ್ರಶ್ನೆಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದಷ್ಟೇ ತಿಳಿಸಿದರು.