ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಾಹನ ಅಪಘಾತ ಪ್ರಕರಣ ತಿರುವು ಪಡೆದುಕೊಂಡಿದ್ದು, ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಅವರು, ಕ್ಯಾಂಟರ್ ವೊಂದು ಢಿಕ್ಕಿ ಹೊಡೆದಿರುವುದನ್ನು ಬಹಿರಂಗಪಡಿಸಿದ್ದಾರೆ.
ಮಂಗಳವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಹೆಬ್ಬಾಳ್ಕರ್, ಅವರ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಗನ್ಮ್ಯಾನ್ ಮತ್ತು ಚಾಲಕನಿಗೆ ಗಾಯಗಳಾಗಿವೆ. ಬೆಂಗಳೂರಿನಿಂದ ಬೆಳಗಾವಿಗೆ ಹಿಂತಿರುಗುತ್ತಿದ್ದಾಗ. ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್ ಬಲಗಡೆಯಿಂದ ಎಡಗಡೆಗೆ ಬಂದಿದೆ. ಈ ವೇಳೆ ಇವರ ಕಾರಿನ ಬಲಭಾಗಕ್ಕೆ ತಾಗಿದೆ. ಅದರಿಂದ ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ, ರಸ್ತೆ ದಾಟುತ್ತಿದ್ದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳಿಕೊಂಡಿದ್ದ. ಆದರೆ, ಕ್ಯಾಂಟರ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಸ್ಥಳದಿಂದ ಪರಾರಿಯಾಗಿರುವುದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.
ಕ್ಯಾಂಟರ್ ಚಾಲಕ ಪರಾರಿಯಾಗಿರುವುದರಿಂದ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕ್ಯಾಂಟರ್ ಮತ್ತು ಚಾಲಕನ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.