30.6.2024ರಂದು ಪಾರ್ವತೀಸುತರ “ಸವಿ ಸವಿ ನೆನಪು” ಸಂಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಯುತ ಶಂಕರ್ಶಾನಭಾಗ್, ವೈಯೊಲಿನ್ ಚಂದ್ರು, ಶ್ರೀಮತಿ ಗೀತಾ ಸತ್ಯಮೂರ್ತಿ, ಶ್ರೀಮತಿ ಗಾಯಿತ್ರಿಕೇಶವಮೂರ್ತಿ ಹಾಗೂ ಶ್ರೀಯುತ ವಿಷ್ಣು ರಾಮನ್ರವರು ದೀಪ ಬೆಳಗಿಸಿ ಬೆಳಗಿನ ನಾದಝೇಂಕಾರ- ಗೀತ ಸಂಗೀತ ಕಾರ್ಯಕ್ರಮಕ್ಕೆ ಶುಭ ಕೋರಿದ ನಂತರ ಶ್ರೀಯುತ ಶಂಕರ್ಶಾನಭಾಗ್ರವರು, ಹಲವಾರು ಶ್ರೇಷ್ಠ ಕವಿಗಳ ಸಾಹಿತ್ಯದ ಬಗ್ಗೆ ಮಾತನಾಡುತ್ತಾ,
ಸಾಹಿತ್ಯದ ಅರ್ಥ ಮತ್ತು ಅದರ ಭಾವನೆಗಳನ್ನ ಅರ್ಥ ಮಾಡಿಕೊಳ್ಳದೆ ಹಾಡಿದಾಗ ಎಂತಹ ಆಭಾಸವಾಗುತ್ತದೆ ಎಂಬುದರ ಅರಿವು ಮೂಡಿಸಿ ಪಾರ್ವತೀಸುತರ ಬಗ್ಗೆ ಮಾತನಾಡುತ್ತಾ ಹೇಳಿದ ಮಾತುಗಳು – ಪಾರ್ವತೀಸುತ ಗಾಯಕರು ಹೌದು ಆದರೆ ನಾನು ಅವರನ್ನು ಸಾಹಿತಿಗಳಾಗಿ ಹೆಚ್ಚು ಗೌರವಿಸುತ್ತೇನೆ. ಕಾರಣ ಸಾಹಿತ್ಯದ ಮೌಲ್ಯಗಳನ್ನು ಅರಿತು ಅವರು 60ವರ್ಷಗಳ ಹಿಂದೆ ಬರೆದಂತ ಹಾಡುಗಳು ಇಂದಿಗೂ ಪ್ರಸ್ತುತ ಎಂದರೆ ಅವರೊಬ್ಬ ಕಾಲಜ್ಞಾನಿಯಾಗಿದ್ದರೇನೋ ಎಂಬ ಭಾವನೆ ವ್ಯಕ್ತಪಡಿಸುತ ಸರಳ ಸಜ್ಜನಿಕೆಯ ಸಹೃದಯರು ಎಂದು ಬಣ್ಣಿಸಿ ಪಾರ್ವತೀಸುತರ ರಚನೆ “ಪರ್ವಾಗಿಲ್ಲ ಸ್ವಾಮಿ ನಮಗೆ ಪರ್ವಾಗಿಲ್ಲ” ಎಂಬ ಹಾಡನ್ನು ಹಾಡಿದಾಗ ತುಂಬಿದ್ದ ಪ್ರೇಕ್ಷಕರ ಸಭಾಗೃಹದ ಕರತಾಡನ ಜೋರಾಗಿತ್ತು.
ಆನಂತರ ಪ್ರಸಿದ್ಧ ಗಾಯಕಗಾಯಕಿಯರು ಪಾರ್ವತೀಸುತರ ಅನೇಕ ಹಾಡುಗಳನ್ನು ಹಾಡಿದ್ದು ನೆರದಿದ್ದ ಪ್ರೇಕ್ಷರಿಗೆ ರಸದೌತಣವಾಗಿತ್ತು.ಮದ್ಯಾಹ್ನದ ಕಾರ್ಯಕ್ರಮದಲ್ಲಿ “ಗೆಜ್ಜೆನಾದ” ಪಾರ್ವತೀಸುತರು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿದ್ದ ಕೆಲವು ಪ್ರಖ್ಯಾತ ಹಾಡುಗಳನ್ನು ನಾಟ್ಯಕ್ಕೆ ಅಳವಡಿಸಿ ಸುಂದರವಾಗಿ ಪ್ರಸ್ತುತ ಪಡಿಸಿದವರು ವಿದುಷಿ ಕುಮಾರಿ ಎನ್. ಹರ್ಷಿತ ಮತ್ತು ತಂಡದವರು.
ನಂತರದ ಕಾರ್ಯಕ್ರಮದಲ್ಲಿ ರಂಗರಸಧಾರೆ ಸಂಸ್ಥೆಯ ಸಂಸ್ಥಾಪಕ, ನಟ ಶ್ರೀ ವಿಜಯ್ಕಶ್ಯಪ್ ತಂಡದವರು ಪ್ರಸ್ತುತ ಪಡಿಸಿದ ಪಾರ್ವತೀಸುತರ ಪ್ರಖ್ಯಾತ ನಾಟಕ “ಮಾವ ಮಾವಕಥೆ ಕೇಳು” ನೆರೆದಿದ್ದ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿತು.ಸಾಹಿತ್ಯ, ಸುಗಮ ಸಂಗೀತ ಲೋಕದ ಅನನ್ಯಪಥಿಕ. ಪಾರ್ವತಿ ಸುತರ ಶಿಸ್ತುಬದ್ದ, ಸರಳ ಸಜ್ಜನಿಕೆ, ಸಹೃದಯತೆ, ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳು ಆದರ್ಷಪ್ರಾಯವಾದದು. ಪಾರ್ವತಿಸುತರ ಮಾತು ಮತ್ತು ಶಬ್ಧ ಇವರ ಸಂಪತ್ತು. ಇವರು ಶಬ್ದಗಳನ್ನು ಹುಡುಕುತ್ತಿರಲಿಲ್ಲ ಶಬ್ದಗಳೇ ಇವರನ್ನು ಹುಡುಕಿ ಸಾಲು ನಿಲ್ಲುತ್ತವೆ.
ರಾಗಭಾವಗಳ ಸರಿಗಮ, ಪದಪದಗಳ ಹೃದಯಂಗಮ ಸಂಗಮ, ಹೀಗೆ ಸವಿಶೇಷ ವ್ಯಕ್ತಿತ್ವ ಮತ್ತು ಸತ್ವ-ಮಹತ್ವ ಪೂರ್ಣ ಕೊಡುಗೆಗಳನ್ನು ನೀಡಿದ ಪಾರ್ವತಿಸುತ ಅವರನ್ನು ಕುರಿತಾದ ಮಾಹಿತಿಯನ್ನು ದಾಖಲಿಸುವುದು ಅತ್ಯವಶ್ಯಕವಾದ ಕೆಲಸವನ್ನು ‘ವಿನಯೋನ್ನತಿ’ ಎಂಬ ಶೀರ್ಷಿಕೆಯ ಈ ಪುಸ್ತಕದಲ್ಲಿ ಅವರ ಮಗಳಾದ ಅರುಣಾಗೋಪಿನಾಥ್ ಅವರು ಪ್ರಶಂಶನೀಯ ಪ್ರಯತ್ನವನ್ನು ಬಹುತೇಕ ಯಶಸ್ವಿಯಾಗಿ ಮಾಡಿದ್ದಾರೆ.
ಸಂಜೆಯ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ “ಪಾರ್ವತೀಸುತರ ಜೀವನ ಕುರಿತಾದ ಸ್ಮರಣೆ ಸಂಚಿಕೆ” ಬಿಡುಗಡೆ ಕಾರ್ಯಕ್ರಮ. ಅಧ್ಯಕ್ಷತೆ ವಹಿಸಿದ್ದ ಪ್ರೊ| ಕೃಷ್ಣೆಗೌಡರೊಂದಿಗೆ, ಡಾ|ಬ.ಲ.ಸುರೇಶ್, ಡಾ|ಜಯಶ್ರೀ ಅರವಿಂದ್ಶ್ರೀಮತಿ ಕಸ್ತೂರಿ ಶಂಕರ್, ಶ್ರೀಯುತ ಅಣಕುರಾಮನಾಥ್ ಹಾಗೂ ಶ್ರೀಯುತ ಚಿಕ್ಕರಸುರವರು ದೀಪ ಬೆಳಗಿಸಿ ಸ್ಮರಣ ಸಂಚಿಕೆ “ವಿನಯೋನ್ನತಿ” ಸಂಪುಟವನ್ನು ಲೋಕಾರ್ಪಣೆ ಮಾಡಿದರು.
ಡಾ|ಜಯಶ್ರೀ ಅರವಿಂದ ಅವರು ಪಾರ್ವತೀಸುತರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ ದೇಹ ಮಾತ್ರವೆ ನಮ್ಮಿಂದದೂರಾಗಿದೆ, ಆದರೆ ಅವರ ಹಾಡುಗಳು, ಅವರ ನಾಟಕಗಳು ಎಂದಿಗೂ ನಮ್ಮೊಡನೆ ಜೀವಂತವಾಗಿ ಉಳಿಯುತ್ತವೆ ಎಂದು ದಿವಂಗತ ಎಂಬ ಪದವನ್ನು ಎಲ್ಲಿಯೂ ಬಳಸಬೇಡಿ ಎಂಬ ಸೂಚನೆಯನ್ನು ಸಹ ನೀಡಿದರು. ಡಾ|ಬ.ಲ. ಸುರೇಶ್ ರವರು ಪಾರ್ವತೀಸುತರ ಕಾರ್ಯಗಳನ್ನು ಶ್ಲಾಘಿಸಿದ್ದು ಸಂಪುಟಕ್ಕೆ ಇಟ್ಟ “ವಿನಯೋನ್ನತಿ” ಎಂಬ ಹೆಸರು ಪಾರ್ವತೀಸುತರಿಗೆ ಅನ್ವರ್ಥನಾಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀಯುತ ಅಣಕುರಾಮನಾಥ್ರವರು ವೇದಿಕೆಯಲ್ಲಿದ ಗಣ್ಯರ ಪರಿಚಯವನ್ನು ತಮ್ಮ ಎಂದಿನ ಹಾಸ್ಯ ನುಡಿಗಳಿಂದಲೇ ಪರಿಚಯ ಮಾಡಿಬಿಟ್ಟಿದ್ದರು.
ಕೊನೆಯದಾಗಿ ಮಾತನಾಡಿದ ಪ್ರೊ|ಕೃಷ್ಣೆಗೌಡರು ಭಾಷಣ ಮಾಡಿ ಇಂದಿನ ಈ ಸಮಾರಂಭಕ್ಕೆ ತುಂಬು ಸಂತೋಷದಿಂದಲೆ ಅಧ್ಯಕ್ಷತೆ ವಹಿಸಿ ಪಾರ್ವತೀಸುತರ ಪುಸ್ತಕದ ಹೊಣೆಹೊತ್ತು ಪ್ರೀತಿಯಿಂದಲೇ ಜವಾಬ್ದಾರಿ ನಿರ್ವಹಿಸಿದ್ದೇನೆ. ಕಾರಣ ಪಾರ್ವತೀಸುತ ಎಂದರೆ ಅದೊಂದು ಚೇತನ. ಅವರ ವಿನಯವಂತಿಕೆ, ಸಜ್ಜನಿಕೆ, ಅವರ ಹಾಡುಗಳು, ಅವರವಿಚಾರಗಳು, ಅವರ ಸಜ್ಜನಿಕೆ ಎಲ್ಲವು ನನಗೆ ಅಚ್ಚುಮೆಚ್ಚು. ಹಾಗಾಗೆ ಬಹಳ ಇಷ್ಟಪಟ್ಟು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದು ನುಡಿದು ಭಾವುಕರಾಗಿದ್ದರು. ಒಟ್ಟಿನಲ್ಲಿ ಇದೊಂದು ಸುಂದರ ಸಂಸ್ಮರೆಣಯ ಕಾರ್ಯಕ್ರಮವಾಗಿತ್ತು ಎಂಬ ಭಾವನೆ ನೆರದಿದ್ದಎಲ್ಲಾ ಪ್ರೇಕ್ಷಕರ ಮಾತಾಗಿತ್ತು.
ವರದಿ: ನಾಗೇಂದ್ರ ಹೆಬ್ಬಲಗುಪ್ಪೆ